ತುಮಕೂರು:

      ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಗಣನೀಯವಾಗಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 20ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಸೋಂಕಿತರಿರುವ ಗ್ರಾಮಗಳನ್ನು ರೆಡ್ ಝೋನ್ ಎಂದು ಗುರುತಿಸಿ ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

      ಪ್ರತಿ ಗ್ರಾಮಗಳಲ್ಲಿ ಕೋವಿಡ್ ಸೋಂಕಿನ ನಿಗ್ರಹಕ್ಕಾಗಿ ಹೆಚ್ಚು 20ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ರೆಡ್‍ಝೋನ್ (ಕೆಂಪು ವಲಯ) ಪ್ರದೇಶವೆಂದು ಹಾಗೂ 11ಕ್ಕಿಂತ ಹೆಚ್ಚು 20ಕ್ಕಿಂತ ಕಡಿಮೆ ಸೋಂಕಿತರಿರುವ ಗ್ರಾಮಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

       ಕೆಂಪುವಲಯ ಹಾಗೂ ಹಾಟ್ ಸ್ಪಾಟ್ ವಲಯದ ಗ್ರಾಮಗಳಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಕುಟುಂಬದ ಎಲ್ಲಾ ಸದಸ್ಯರು ಮತ್ತು ಸೋಂಕಿನ ಲಕ್ಷಣಗಳಿರುವ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡುವುದರ ಜೊತೆಗೆ ಐಇಸಿ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಇದಲ್ಲದೆ, ಸ್ಥಳೀಯ ಪಿಹೆಚ್‍ಸಿ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗಿನ ಆರೋಗ್ಯ ತಂಡವು ಪ್ರತಿದಿನ ಗ್ರಾಮಕ್ಕೆ ಭೇಟಿ ನೀಡಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

      ಸೋಂಕು ದೃಢಪಟ್ಟು ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಕೊಠಡಿ ವ್ಯವಸ್ಥೆ ಇಲ್ಲದಿದ್ದಲ್ಲಿ ಅಂತಹ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಬೇಕು. ಕೆಂಪುವಲಯದ ಗ್ರಾಮಗಳಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವಾಗಿ ನಿμÉೀಧಿಸಬೇಕು.

     ಸೋಂಕು ದೃಢಪಟ್ಟ ಸೋಂಕಿತರಿಗೆ ಫಲಿತಾಂಶ ಬಂದ ದಿನದಂದೇ ಕೋವಿಡ್ ಮೆಡಿಕಲ್ ಕಿಟ್ ವಿತರಿಸಬೇಕು. ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿಗಳು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಪ್ರತಿ ಎರಡು ದಿನಗಳಿಗೊಮ್ಮೆ ಭೇಟಿ ನೀಡಿ ಸೋಂಕು ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯವಾಗಿ ಲಭ್ಯವಿರುವ ಸಿಎಸ್ ಆರ್ ಅನುದಾನ, ಎನ್‍ಜಿಒ ಹಾಗೂ ಸ್ವಯಂ ಸೇವಕರನ್ನು ಬಳಸಿಕೊಂಡು ಗ್ರಾಮಗಳಲ್ಲಿ ಸಾರ್ವಜನಿಕರ ಅಗತ್ಯತೆಗೆ ಅನುಗುಣವಾಗಿ ಅವರ ಅವಶ್ಯಕತೆಗಳನ್ನು ಪೂರೈಸಲು ಕ್ರಮವಹಿಸಬೇಕು. ಸದರಿ ಗ್ರಾಮವನ್ನು ಸ್ಯಾನಿಟೈಸ್ ಮಾಡಿಸಬೇಕು ಹಾಗೂ ಸಕ್ರಿಯ ಪ್ರಕರಣಗಳು ಗುಣಮುಖವಾಗುವವರೆಗೂ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹೊಸ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಕೆಂಪು ವಲಯದಲ್ಲಿರುವ ಗ್ರಾಮವನ್ನು ಸೀಲ್ ಡೌನ್ ಮಾಡುವ ಸಂಬಂಧ ಸ್ಥಳೀಯ ಮಟ್ಟದ ಕಾರ್ಯಪಡೆ ಸಮಿತಿ ನಿರ್ಧಾರದಂತೆ ಕ್ರಮಕೈಗೊಳ್ಳಬೇಕು.

       ಗ್ರಾಮಗಳಲ್ಲಿನ ಜನರು ಅಧಿಕಾರಿಗಳೊಂದಿ ಸ್ಫಂದಿಸಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಬೇಕು.
ಉಳಿದಂತೆ ಇತರೆ ಗ್ರಾಮಗಳಲ್ಲಿ ವರದಿಯಾಗುವ (10ಕ್ಕಿಂತ ಕಡಿಮೆ ಕೋವಿಡ್-19 ಸೋಂಕಿತರ ಸಕ್ರಿಯ ಪ್ರಕರಣಗಳು ಇರುವ) ಗ್ರಾಮಗಳಲ್ಲಿ ಎಲ್ಲಾ ಕೋವಿಡ್-19 ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಿಯಮ ಹಾಗೂ ವಿಪತ್ತು ನಿರ್ವಹಣಾ ಕಾಯಿದೆ 2005 ರಡಿ ಮುಂದಿನ ಕ್ರಮವಹಿಸಲಾಗುವುದೆಂದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

(Visited 12 times, 1 visits today)