ತುಮಕೂರು:
ಐದು ಬೆರಳಿನ ಗೂಬೆ ಹಾಗೂ ಎರಡು ತಲೆಯ ಹಾವು ನೀಡುವುದಾಗಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲಾ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಆನಂದ(35), ದೀಪಾ(38), ಜಯಾ(45) ಬಂಧಿತ ಆರೋಪಿಗಳು. ಕಾರ್ಯಾಚರಣೆ ವೇಳೆ ಅದೇ ಕಾಲೋನಿಯ ನಿವಾಸಿಗಳಾದ ಚಿನ್ನು(25), ವಿಜುಕುಮಾರ್(45) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿಗಳು ಪತ್ರಕರ್ತರೊಬ್ಬರನ್ನು ಸಂಪರ್ಕಿಸಿ ಐದು ಬೆರಳಿನ ಗೂಬೆ ಹಾಗೂ 2 ಕಾಲಿನ ಹಾವುಗಳನ್ನು ಮನೆಯಲ್ಲಿಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆ ಎಂದು ನಂಬಿಸಿದ್ದರು. ಇದನ್ನು ಪೊಲೀಸಗರ ಗಮನಕ್ಕೆ ತಂದಾಗ ಪೊಲೀಸರು ಆ ಪತ್ರಕರ್ತನ ಮೂಲಕ ಕಾರ್ಯತಂತ್ರ ರೂಪಿಸಿದ್ದಾರೆ.
ಅದರಂತೆ ಪತ್ರಕರ್ತ ತನ್ನ ಸ್ನೇಹಿತನೊಂದಿಗೆ ಅಕ್ಕಿಪಿಕ್ಕಿ ಕಾಲೋನಿಗೆ ಹೋದಾಗ ಆರೋಪಿಗಳು ಒಂದು ಗೂಬೆಯನ್ನು ತೋರಿಸಿ ಎರಡು ಲಕ್ಷ ನೀಡಿದರೆ ಅದನ್ನು ಮಾರುವುದಾಗಿ ಹೇಳಿದ್ದಾರೆ. ಅದಂತೆ ಅವರಿಬ್ಬರು ಸಂಜೆ ಹಣ ತರುತ್ತೇವೆ ಎಂದು ಹಿಂದಿರುಗಿ ಬಂದಿದ್ದಾರೆ.
ಪೊಲೀಸರ ಸೂಚನೆಯಂತೆ ಮಾದಾವರ ತಾಂಡದ ಬಸ್ ನಿಲ್ದಾಣದ ಬಳಿ ಸಂಜೆ 6 ಗಂಟೆಗೆ ಮಾರುವೇಷದಲ್ಲಿದ್ದ ಪೊಲಿಸರೊಂದಿಗೆ ಅಲ್ಲಿಗೆ ತೆರಳಿದ್ದಾರೆ.
ಆಗ ಆರೋಪಿಗಳು ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿದಾಗ ಪೊಲೀಸರು ಆರೋಪಿಗಳನ್ನು ಸುತ್ತುವರೆದು ಮೂವರನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆಯೂ ಸಾರ್ವಜನಿಕರಿಗೆ ಗೂಬೆಯನ್ನು ತೋರಿಸಿ ತಾವು ಹೇಳಿದ ಜಾಗಕ್ಕೆ ಹಣ ತರುವಂತೆ ಹೇಳಿ ದರೋಡೆ ಮಾಡಿರುವ ಸಾಧ್ಯತೆ ಇದೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.