ಹುಳಿಯಾರು:
ಹುಳಿಯಾರಿನ ಅಂಬೇಡ್ಕರ್ ಭವನದ ಹಿಂಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು ಈಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಿದೆ.
ಹುಳಿಯಾರು ಪಟ್ಟಣ ಸೇರಿದಂತೆ ಕೆಂಕೆರೆ, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ವಳಗೆರೆಹಳ್ಳಿ ಮುಂತಾದಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ತುರ್ತಾಗಿ ಹುಳಿಯಾರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಆರಂಭಿಸಲಾಗಿದೆ.
ಮೇ. 20ನೇ ತಾರೀಖಿನಿಂದ ಈಚೆಗೆ ಪಾಸಿಟಿವ್ ಬಂದಿರುವವರು, ಹೋಂ ಕ್ವಾರಂಟೈನ್‍ನಲ್ಲಿರುವವರನ್ನು ಈ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು ಆಶಾ, ಅಂಗನವಾಡಿ ಮತ್ತು ಪಪಂ ಸಿಬ್ಬಂದಿಗಳು ಸೋಂಕಿತರನ್ನು ಕೇರ್ ಸೆಂಟರ್‍ಗೆ ಕರೆತರಲಿದ್ದಾರೆ. ಸೋಂಕಿತರು ನಿರಾಕರಿಸಿದರೆ ಪೊಲೀಸ್ ಸಹಕಾರ ಸಹ ಪಡೆಯುವುದಾಗಿ ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ನ ನೋಡಲ್ ಅಧಿಕಾರಿಯಾಗಿ ಪಪಂ ಕಿರಿಯ ಅಭಿಯಂತರ ಡಿ.ಮಂಜುನಾಥ್ ಉಸ್ತುವಾರಿ ವಹಿಸಲಿದ್ದು ಪಾಸಿಟಿವ್ ಹೊಂದಿರುವವರಿಗೆ ಆರೋಗ್ಯ ತಪಾಸಣೆ, ಊಟದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸಲು ತಾಲೂಕು ಆಡಳಿತದಿಂದ ಸಿಬ್ಬಂದಿ ನೇಮಿಸಲಾಗಿದೆ.