ಮಧುಗಿರಿ:
ವಿಶಾಲ ಕಟ್ಟಡದಲ್ಲಿರುವ ಸಿಂಡಿಕೇಟ್ ಬ್ಯಾಂಕನ್ನು ಮತ್ತೊಂದು ಕೆನರಾ ಬ್ಯಾಂಕ್ ಶಾಖೆಗೆ ವರ್ಗಾಯಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಮೂಲ ಶಾಖೆಯನ್ನೇ ಇಲ್ಲಿಗೆ ವರ್ಗಾಯಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಶಾಖೆಯು ಆರಂಭವಾಗಿ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿತ್ತು. ಆದರೆ ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಿದ ನಂತರ ಮೂಲ ಕೆನರಾ ಬ್ಯಾಂಕ್ ಕಟ್ಟಡದಲ್ಲಿ ಸಿಂಡಿಕೇಟ್ ಶಾಖೆಯನ್ನು ವಿಲೀನಗೊಳಿಸಲಾಗುವುದು ಎಂದು ಬ್ಯಾಂಕಿನಲ್ಲಿ ಫ್ಲೆಕ್ಸ್ ಹಾಕಿ ಸಾರ್ವಜನಿಕರ ಗಮನಕ್ಕೆ ತಂದಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ಶಾಖೆಯು ಮುಖ್ಯ ರಸ್ತೆಯಲ್ಲಿದ್ದು, ವಿಶಾಲವಾದ ಕಟ್ಟಡದ ಜೊತೆಗೆ ಎಲ್ಲಾ ಅನುಕೂಲಗಳಿದ್ದು, ಸೂಕ್ತ ಗಾಳಿ ಬೆಳಕಿನ ಜೊತೆಗೆ, ಭದ್ರತೆ, ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದರೆ ಕೆನರಾ ಬ್ಯಾಂಕಿನ ಶಾಖೆಯು ಬಹಳಷ್ಟು ಚಿಕ್ಕದಾಗಿದ್ದು, ಇಕ್ಕಟ್ಟಾದ ಸ್ಥಳದಲ್ಲಿದೆ. ಪಕ್ಕದಲ್ಲೇ ಸಂತೆ ಮೈದಾನ, ವೈನ್ಸ್ ಅಂಗಡಿಯಿದ್ದು, ಇದರಿಂದ ಮಹಿಳೆಯರು ಮತ್ತು ವೃದ್ದರಿಗೆ ಭದ್ರತೆಯಿರುವುದಿಲ್ಲ ಎಂಬುದು ಬ್ಯಾಂಕ್ ಗ್ರಾಹಕರ ದೂರು. ಅಲ್ಲದೇ ಸಿಂಡಿಕೇಟ್ ಶಾಖೆಯನ್ನು ಕೆನರಾ ಬ್ಯಾಂಕಿನ ಶಾಖೆಯ ಎರಡನೇ ಅಂತಸ್ಥಿಗೆ ವರ್ಗಾಯಿಸುತ್ತಿದ್ದು, ಪಿಂಚಣಿ ಹಣ ಪಡೆಯುವ ವೃದ್ದರಿಗೆ ಮೆಟ್ಟಿಲು ಹತ್ತಿ ಹಣ ಪಡೆಯಲು ಬಹಳಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಇದರ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಗಮನ ಹರಿಸಿ ಈಗಿರುವ ಸಿಂಡಿಕೇಟ್ ಶಾಖೆಯ ಕಟ್ಟಡಕ್ಕೇ ಕೆನರಾ ಬ್ಯಾಂಕನ್ನು ವರ್ಗಾಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದು, ತಪ್ಪಿದಲ್ಲಿ ಬ್ಯಾಂಕ್ ಮುಂಭಾಗ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.