ಹುಳಿಯಾರು:

      ಅರಳಿ ಮರದ ಕೊಂಬೆ ಬಿದ್ದು ಮುರಿದಿರುವ ವಿದ್ಯುತ್ ಕಂಬ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿರುವ ಪರಿಣಾಮ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಗೊಲ್ಲರಹಟ್ಟಿಯ ಕೆಲ ನಿವಾಸಿಗಳು ಕತ್ತಲೆಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

      ಇಲ್ಲಿನ ಬಾವಿಯ ಹತ್ತಿರದ ವಿದ್ಯುತ್ ಕಂಬದಿಂದ ಕಿರುನೀರು ಸರಬರಾಜು ವ್ಯವಸ್ಥೆಗೆ ಹಾಗೂ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈ ಕಂಬ ಕಳೆದ ಒಂದು ವಾರದ ಹಿಂದೆ ಮಳೆಗಾಳಿಗೆ ಬಿದ್ದ ಮರದ ಕೊಂಬೆಯಿಂದ ಮುರಿದಿದೆ. ವಿಷಯ ತಿಳಿದ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಬಿಟ್ಟರೆ ಕಂಬ ಬದಲಾವಣೆಗೆ ಮುಂದಾಗಿಲ್ಲ.

      ಪರಿಣಾಮ ಒಂದು ವಾರದಿಂದ ನೀರು ಸರಬರಾಜು ಇಲ್ಲದೆ ಇಲ್ಲಿನ ನಿವಾಸಿಗಳು ಸಮೀಪದ ತೋಟಗಳಿಂದ ಹಾಗೂ ಕೈ ಪಂಪುಗಳಿಂದ ನೀರನ್ನು ತರುತ್ತಿದ್ದಾರೆ. ಅಲ್ಲದೆ ವಾರದಿಂದ ಮನೆಗಳಿಗೆ ಕರೆಂಟ್ ಇಲ್ಲದೆ ವಿದ್ಯುತ್ ಇರುವ ಮನೆಗಳಿಗೆ ತೆರಳಿ ಅಡಿಗೆಗೆ ಮಸಾಲೆ ರುಬ್ಬಿಸಿಕೊಳ್ಳುವ, ಟಿವಿ ನೋಡುವ ಅನಿವಾರ್ಯತೆ ಸೃಷ್ಠಿಯಾಗಿದೆ. ಅಲ್ಲದೆ ಕತ್ತಲೆಯಲ್ಲೇ ರಾತ್ರಿ ಕಳೆಯುತ್ತಿದ್ದಾರೆ.

      ಕಂಬ ಮುರಿದಿರುವುದರಿಂದ ಕಂಬದ ವೈರ್ ಸಹ ಕೆಳಗೆ ಜೋತು ಬಿದ್ದಿದ್ದರೂ ತೆರವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಹಾಗಾಗಿ ಬಿಳಿಕಲ್‍ಗೊಲ್ಲರಹಟ್ಟಿಗೆ ಹಾಗೂ ಹೊಲತೋಟಗಳಿಗೆ ಓಡಾಡುವ ಜನರಿಗೆ ತೀರ್ವ ತೊಂದರೆಯಾಗಿದೆ. ಹಾಗಾಗಿ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಶೀಘ್ರ ಕಂಬ ಬದಲಿಸಿ ಆಗಿರುವ ಅನಾನುಕೂಲ ಸರಿಪಡಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.

(Visited 8 times, 1 visits today)