ತುಮಕೂರು:
ಕಟ್ಟಡ ಕಾರ್ಮಿಕರ ಮಂಡಳಿಗೆ ನರೇಗಾ ಕಾರ್ಮಿಕರ ನೊಂದಣಿಯನ್ನು ತಡೆಗಟ್ಟಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 2 ರಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಐಟಿಯುಸಿ ಹಾಗೂ ಇನ್ನಿತರ ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ 2006ರಲ್ಲಿ ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ವಿತ್ವಕ್ಕೆ ಬಂದಿದ್ದು,2018ರ ಸೆಪ್ಟಂಬರ್ ಅಂತ್ಯಕ್ಕೆ ಸುಮಾರು 18.18 ಲಕ್ಷದ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದು, ಸೆಸ್ ರೂಪದಲ್ಲಿ 7064.74 ಕೋಟಿ ರೂ ಹಣ ಸಂಗ್ರಹವಾಗಿದೆ.ತಮ್ಮಲ್ಲಿ ನೊಂದಾಯಿಸಿರುವ ಕಾರ್ಮಿಕರಿಗೆ 14 ವಿವಿಧ ತರಹದ ಸೌಲಭ್ಯ ನೀಡಬೇಕಾದ ಮಂಡಳಿ ಇದುವರೆಗೂ ಕೇವಲ 418 ಕೋಟಿ ರೂ ಮಾತ್ರ ಖರ್ಚು ಮಾಡಿದ್ದು, 415 ಕೋಟಿರೂಗಳ ತೆರಿಗೆ ಪಾವತಿಸಿದೆ. ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ದೂರಿದರು.
ಅಧಿಕಾರಿಗಳು ಮತ್ತು ಕಾರ್ಮಿಕ ಮಂತ್ರಿಗಳ ವಿಳಂಬ ನೀತಿಯಿಂದಾಗಿ ಕಲ್ಯಾಣ ಮಂಡಳಿಯಲ್ಲಿ ಹಣವಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.ಈ ನಡುವೆ ಐಕ್ಯ ಎಂಬ ಸರಕಾರೇತರ ಸಂಸ್ಥೆ ಕಳೆದ ಮೂರುತಿಂಗಳಲ್ಲಿ ಸುಮಾರು 4 ಲಕ್ಷ ಎನ್.ಆರ್.ಇ.ಜಿ.ಎ ಕೂಲಿಯಾಳುಗಳನ್ನು ಕಟ್ಟಡ ಕಾರ್ಮಿಕರೆಂದು ನೊಂದಾಯಿಸಿದ್ದು,ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ವಾಗಲಿದೆ.ಅದ್ದರಿಂದ ಕೂಡಲೇ ಎನ್.ಆರ್.ಇ.ಜಿ.ಎ ಕೂಲಿಯಾಳುಗಳ ನೊಂದಣಿಗೆ ತಡೆಯೊಡ್ಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಕಾರ್ಮಿಕ ಮಂಡಳಿ ನೀಡುವ ಹೆರಿಗೆ ಭತ್ಯೆ,ಮದುವೆ ಭತ್ಯೆ ಗಳನ್ನು ಅವರ ಮಕ್ಕಳು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಅರ್ಜಿಗಳು ವಿಲೇವಾರಿಯಾಗಿಲ್ಲ.ಈಗಾಗಿ ಕಾರ್ಮಿಕರು ಮಂಡಳಿಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸಲು ಸಮಯ ನಿಗಧಿ ಮಾಡಿದಂತೆ, ಅರ್ಜಿ ವಿಲೇವಾರಿಗೂ ಸಮಯ ನಿಗಧಿ ಮಾಡಿ, ಕಾರ್ಮಿಕರಿಗೆ ಸವಲತ್ತು ನೀಡಬೇಕೆಂಬುದು ನಮ್ಮ ಒತ್ತಾಯ. ಕಾರ್ಮಿಕರ ಕಲ್ಯಾಣ ಮಂಡಳಿ ಬಳಿ ಇರುವ ಹಣವನ್ನು ಸವಲತ್ತು ನೀಡಲು ಉಪಯೋಗಿಸುವ ಬದಲು ಕಾರ್ಮಿಕರ ಭವನ, ಬಸ್ ಪಾಸ್,ಏರ್ ಅಂಬ್ಯುಲೇನ್,ಎಲ್.ಪಿ.ಜಿ.ಗ್ಯಾಸ್ ವಿತರಣೆಯಂತಹ ಕಾರ್ಯಗಳಿಗೆ ಖರ್ಚು ಮಾಡಲು ಸರಕಾರ ಮುಂದಾಗಿದೆ.ಕೂಡಲೇ ಈ ತೀರ್ಮಾನಗಳಿಂದ ಹಿಂದೆ ಸರಿದು, ಸೆಸ್‍ನಿಂದ ಸಂಗ್ರಹವಾದ ಹಣವನ್ನು ಸವಲತ್ತು ನೀಡಲಷ್ಟೇ ಬಳಕೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 2 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ಇದರಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಗಿರೀಶ್ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರುಗಳಾದ ಶಶಿಕಾಂತ್, ಆಶ್ವಥನಾರಾಯಣ, ದೇವರಾಜು,ನಾಗರತ್ನಮ್ಮ, ಸತ್ಯನಾರಾಯಣ, ದೊಡ್ಡತಿಮ್ಮಯ್ಯ, ಶಿವಾನಂದ್,ಭೂತರಾಜು, ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.