ತುಮಕೂರು :
ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಅವರು ಮಕ್ಕಳಿಗೆ ಕರೆ ನೀಡಿದರು.
ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಮಕ್ಕಳ ಸಹಾಯವಾಣಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಬಾಲಭವನದಲ್ಲಿ “ಕನ್ನಡ ರಾಜ್ಯೋತ್ಸವ” ಹಾಗೂ “ಮಕ್ಕಳ ದಿನಾಚರಣೆ”ಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ/ಕನ್ನಡ ಗೀತೆ/ರಂಗೋಲಿ/ವೇಷಭೂಷಣ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಆಂಗ್ಲಭಾಷೆಯನ್ನು ಕಲಿಯುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಡಿಡಿಪಿಐ ಕೆ.ಮಂಜುನಾಥ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ, ಇಂತಹ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬಾಲಭವನ ಸಂಘದ ಸದಸ್ಯ ನರಸಿಂಹಮೂರ್ತಿ ಮಾತನಾಡಿ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆಯು ಅಲೆಮಾರಿ ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ವಿಧ್ಯಾಬ್ಯಾಸವನ್ನು ಮುಂದುವರೆಸಲು ಸಮಾಲೋಚನೆ ನಡೆಸಿ ಶೈಕ್ಷಣಿಕ ಪರಿಕರಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು(ಗ್ರಾಮಾಂತರ) ಸಿಡಿಪಿಓ ಶ್ರೀಧರ್ ಎಂ.ಎಸ್., ಕಾರ್ಯಕ್ರಮ ಸಂಯೋಜಿಕಿ ಪಿ.ಮಮತ, ಮಕ್ಕಳ ಪೋಷಕರು, ವಿವಿಧ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ ವತಿಯಿಂದ ಅಮೃತಶ್ರೀ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.