ತುಮಕೂರು:

     ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ 50 ರೆಡ್ ಜೋನ್ ಸಂಖ್ಯೆ ಕಡಿಮೆಯಾಗಿದೆ. ಮೇ.25ರಂದು 76 ಇದ್ದ ರೆಡ್ ಜೋನ್‍ಗಳ ಸಂಖ್ಯೆ ಜೂನ್ 2ರಂದು 27ಕ್ಕೆ ಇಳಿದಿದೆ. ಅದರಂತೆಯೇ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಸಹ 240 ರಿಂದ 123ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.

ಅದೇ ರೀತಿ ಶೇ.48ರಷ್ಟಿದ್ದ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ. 17ಕ್ಕೆ ಇಳಿದಿದ್ದು, 2500 ರಿಂದ 3000ದವರೆಗೆ ದೃಢವಾಗುತ್ತಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆಯೂ 750-850ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದೆ.

      ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ.25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಆದರೆ ಜೂ.2ಕ್ಕೆ 1242 ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳೇ ಇಲ್ಲ. ಒಂದೇ ಒಂದು ಸೋಂಕಿನ ಪ್ರಕರಣವಿರುವ 503 ಗ್ರಾಮಗಳಿವೆ.

ಕೋವಿಡ್ ಪರೀಕ್ಷೆ ಹೆಚ್ಚಳ:

      ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನಗಳಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಸೋಂಕು ದೃಢಪಟ್ಟವರಿಗೆ ತಕ್ಷಣವೇ ಕೋವಿಡ್ ಔಷಧ ಕಿಟ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ನೀಡುವ ಔಷಧಗಳನ್ನು ಹೊರತುಪಡಿಸಿ ಈಗಾಗಲೇ 35 ಸಾವಿರ ಮೆಡಿಸನ್ ಕಿಟ್ ಸಿದ್ಧಪಡಿಸಿ 31 ಸಾವಿರ ಕಿಟ್ ವಿತರಣೆ ಮಾಡಿದ್ದೇವೆ. ಅದೇ ರೀತಿಯಲ್ಲಿಯೇ ವಿವಿಧ ದಾನಿಗಳೂ ಸಹಿತ ಆಹಾರ ಕಿಟ್ ಗಳನ್ನು ಸೋಂಕಿತರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಅವರವರ ಮಟ್ಟದಲ್ಲಿಯೇ ನೆರವು ನೀಡುತ್ತಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಸೋಂಕಿನ ಇಳಿಕೆಗೆ ಕಟ್ಟುನಿಟ್ಟಿನ ಕ್ರಮ:

      ಮುಂದಿನ ವಾರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳು, ತಾಲೂಕು ಪಂಚಾಯಿತಿಯ ಆಡಳಿತಾಧಿಕಾರಿಗಳು ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳ ಸೇವೆ ಉಪಯೋಗಿಸಿಕೊಂಡು ಸಂಪೂರ್ಣವಾಗಿ ಕೊರೋನಾ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ.

ಲಸಿಕೆ ಸಮರ್ಪಕವಾಗಿ ವಿತರಣೆ:

      ಕೋವಿಡ್ ಲಸಿಕೆ ವಿತರಣೆ ಸಂಬಂಧ ಈಗಾಗಲೇ ಸಭೆ ನಡೆಸಿ, ಎಲ್ಲಾ ಪಿಎಚ್‍ಸಿ ವೈದ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್, ತಾಲೂಕು ಪಂಚಾಯತಿ ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸರ್ಕಾರದಿಂದ ಪೂರೈಕೆಯಾಗುತ್ತಿರುವ ಲಸಿಕೆಯನ್ನು 45ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಅದರಂತೆಯೇ 18 ರಿಂದ 44 ವರ್ಷದೊಳಗಿನ ಪ್ರಿಯಾರಿಟಿ ಗುಂಪುಗಳಿಗೆ ಲಸಿಕೆ ಬಂದ ದಿನವೇ ಸಮರ್ಪಕ ಮಾಹಿತಿಯನ್ನು ಒದಗಿಸಿ ವಿತರಣೆ ಮಾಡಬೇಕೆಂದು ಸೂಚಿಸಿದ್ದು, ಅದರಂತೆ ಲಸಿಕಾಕರಣ ನಡೆಯುತ್ತಿದೆ. ಸರ್ಕಾರದಿಂದ ಬರುವ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡಲು ಸೂಕ್ತ ಕ್ರಮ ವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ. 51ರಷ್ಟು ಲಸಿಕೆ ನೀಡಲಾಗಿದೆ. ಅಂತೆಯೇ 18 ರಿಂದ 44 ವರ್ಷದೊಳಗಿನ ಪ್ರಿಯಾರಿಟಿ ಗುಂಪುಗಳ 24ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ.

ಮತದಾನ ಗುರುತಿನ ಚೀಟಿ ನೆರವಿನಿಂದ ಲಸಿಕೆಯ ಸಮರ್ಪಕ ವಿತರಣೆ:

      ಗ್ರಾಮ ಮಟ್ಟದಲ್ಲಿ ಲಸಿಕಾ ವಿತರಣೆಗೆ ಗ್ರಾಮಲೆಕ್ಕಿಗ ಮತ್ತು ಪಿಡಿಒಗಳನ್ನು ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಲಸಿಕೆ ಪೂರೈಕೆಯಾದಾಗ ವಿತರಣೆಗೆ ಸಂಬಂಧಿಸಿದ ಮಾಹಿತಿಯನ್ನು ಗ್ರಾಮದ ಜನರಿಗೆ ತಲುಪಿಸಬೇಕು. ಮಾಹಿತಿ ಮತ್ತು ಲಸಿಕೆ ಆಧಾರದ ಮೇಲೆ ಆಶಾ ಕಾರ್ಯಕರ್ತೆಯರು ಅμÉ್ಟೀ ಪ್ರಮಾಣದ ಜನರನ್ನು ಲಸಿಕೆ ಹಾಕಿಸಲು ಕರೆತರಬೇಕು. ಇದಲ್ಲದೆ, ಗ್ರಾಮಲೆಕ್ಕಿಗರು ಪ್ರತಿ ಗ್ರಾಮದ ಪ್ರತಿಯೊಬ್ಬರ ಮತದಾನದ ಗುರುತಿನ ಚೀಟಿ ಮಾಹಿತಿ ಇಟ್ಟುಕೊಂಡು ಲಸಿಕೆ ಯಾರಿಗೆ ನೀಡಿಲ್ಲ, ಯಾರಿಗೆ ನೀಡಲಾಗಿದೆ ಎಂಬುದನ್ನು ಗುರುತು(ಮಾರ್ಕ್) ಮಾಡಿಕೊಳ್ಳಬೇಕು.ಯಾರು ಲಸಿಕೆ ಪಡೆದಿಲ್ಲವೋ ಅವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರಿಗೆ ಒದಗಿಸಬೇಕು. ಈ ಮಾಹಿತಿ ಆಧಾರದಲ್ಲಿ ಲಸಿಕೆ ಲಭ್ಯವಿದ್ದಾಗ ಲಸಿಕೆ ಪಡೆಯದವರಿಗೆ ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿಸಬೇಕು ಎಂದು ಸೂಚಿಸಲಾಗಿದೆ. ಅಂತೆಯೇ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪಾಲಿಕೆ ಆಯುಕ್ತರು, ಚೀಫ್ ಆಫಿಸರ್, ಬಿಲ್ ಕಲೆಕ್ಟರ್ ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ಬಳಸಿಕೊಂಡು ಹೆಚ್ಚು ಜಾಗೃತಿ ಮೂಡಿಸಿ ಲಸಿಕೆ ನೀಡಲಾಗುತ್ತಿದೆ.

       ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 751243 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈಗಾಗಲೇ 384908 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೆ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಇತರೆ ಸಿಬ್ಬಂದಿಗಳಿಗೆ 450808 ಮೊದಲನೇ ಡೋಸ್ ಮತ್ತು 115215 ಎರಡನೇ ಡೋಸ್ ಸೇರಿದಂತೆ ಒಟ್ಟು 566023 ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 

(Visited 5 times, 1 visits today)