ಹುಳಿಯಾರು :
ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ 100 ಮಿಮೀ ದಾಖಲೆಯ ಮಳೆಯಾಗಿದ್ದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ. ಕಳೆದ ಹತ್ತನ್ನೆರಡು ವರ್ಷದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದ ನಿದರ್ಶನವಿಲ್ಲ.
ಮೇ.25 ರಂದು ರೋಹಿಣಿ ಮಳೆ ಹುಟ್ಟಿದ್ದರೂ ಇಲ್ಲಿಯವರೆವಿಗೆ ಒಂದು ದಿನವೂ ಬೀಳದೆ ನಿರಾಸೆ ಮೂಡಿಸಿತ್ತು. ಕಳೆದ 2 ದಿನಗಳಲ್ಲಿ ತಾಲೂಕಿನ ಅಲ್ಲಲ್ಲಿ ಮಳೆ ಬಿದ್ದಿದ್ದರೂ ಹುಳಿಯಾರಿಗೆ ಮಳೆ ಆಗಿರಲಿಲ್ಲ. ಆದರೆ ಬುಧವಾರ ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ರಾತ್ರಿ 11 ಗಂಟೆಯ ನಂತರ ಅಬ್ಬರಿಸಿತು. ಸತತ 3 ಗಂಟೆಗಳ ಕಾಲ ಜೋರಾಗಿ ಸುರಿದು ನಂತರ ನಿಧಾನವಾಗಿ ಬೆಳಗಿನ ಜಾವ 6 ಗಂಟೆಯವರೆವಿಗೂ ಉತ್ತಮ ಮಳೆಯಾಯಿತು.
ಹುಳಿಯಾರು ಪಟ್ಟಣವಲ್ಲದೆ ತಾಲೂಕಿನಾಧ್ಯಂತ ರೋಹಿಣಿ ಮಳೆ ಸುರಿದಿದೆ. ಮಳೆಯಿಂದಾಗಿ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿಹೊಂಡ, ಕಟ್ಟೆ ಹಾಗೂ ಕೆರೆಗಳಿಗೆ ನೀರು ಬಂದಿದೆ. ತೋಟ, ಹೊಲಗಳಲ್ಲಿ ನೀರು ನಿಂತಿದೆ. ಕೆಲ ಗ್ರಾಮೀಣ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ. ಮಳೆಯ ಜೊತೆ ಗುಡಿಗು, ಸಿಡಿಲು ಬಿಟ್ಟರೆ ಗಾಳಿಯಿಲ್ಲದ ಪರಿಣಾಮ ಅನಾಹುತಗಳು ಸಂಭವಿಸಿಲ್ಲ.
ಭರಣಿ ಮಳೆ ಆರಂಭದಲ್ಲಿ ಉತ್ತಮ ಮಳೆಯಾಗಿ ರೈತರು ಕೃಷಿಕಡೆ ಮುಖ ಮಾಡುವಂತೆ ಮಾಡಿತ್ತು. ಪರಿಣಾಮ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಎಳ್ಳು ಬಿತ್ತಿದ್ದರು. ನಂತರ ಕೃತಿಕಾ ಮಳೆಯೂ ಸಹ ಭರವಸೆ ಮೂಡಿಸಿತ್ತು. ಬಿತ್ತಿದ್ದ ಬೆಳೆಗಳೆಲ್ಲ ಹುಲುಸಾಗಿ ಬೆಳೆದಿದ್ದವು. ಆದರೆ ಕಳೆದ ಹತ್ತನ್ನೆರಡು ದಿನಗಳಿಂದಲೂ ಮಳೆ ಬೀಳದೆ ಬೆಳೆ ಒಣಗುವ ಬೀತಿ ರೈತರಲ್ಲಿ ಮೂಡಿಸಿತ್ತು.
ಆದರೆ ಬುಧವಾರ ರಾತ್ರಿ ಸುರಿದ ಮಳೆ ರೈತರ ಸಂಭ್ರಮಕ್ಕೆ ಕಾರಣವಾಗಿದೆ. ಬಿತ್ತಿದ್ದ ಬೆಳೆಗಳಿಗೆ ವರವಾಗಿದ್ದರೆ ಮುಂದಿನ ರಾಗಿ, ತೊಗರಿ ಬಿತ್ತನೆಗೆ ಸಹಾಯವಾಗಿದೆ. ಒಟ್ಟಾರೆ ಈ ವರ್ಷ ಮಳೆ ರೈತರ ಕೈ ಹಿಡಿಯುವ ಲಕ್ಷಣಗಳು ಕಾಣಸಿಗುತ್ತಿದೆ.
ಮಳೆ ವಿವರ:
ಹುಳಿಯಾರು 100.2 ಮಿಮೀ, ಬೋರನಕಣಿವೆ 50.4 ಮಿಮೀ, ಮತ್ತಿಘಟ್ಟ 52.2 ಮಿಮೀ, ದೊಡ್ಡಎಣ್ಣೇಗೆರೆ 16.2 ಮಿಮೀ, ಶೆಟ್ಟಿಕೆರೆ 42.3 ಮಿಮೀ, ಚಿಕ್ಕನಾಯಕನಹಳ್ಳಿ 19.8 ಮಿಮೀ. ಸಿಂಗದಹಳ್ಳಿ 25.4 ಮಿಮೀ.