ತುಮಕೂರು:
ಸರ್ಕಾರವು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಗಳ ಮನೆಗಳನ್ನು ನಿರ್ಮಿಸುವ ಮಹತ್ತರ ಗುರಿ ಹೊಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆರ್ಶೀವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವವರ ಜೊತೆಗೆ ಸರ್ಕಾರ ಸದಾ ಇರುತ್ತದೆ. ಈಗಾಗಲೇ ಕೊರೋನಾ ಪರಿಹಾರವನ್ನೂ ಸಹ ಘೋಷಿಸಿದ್ದು, ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಆದ್ಯತೆಗನುಸಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು ಮೂರು ಲಕ್ಷ ಮನೆಗಳನ್ನು ನಿರ್ಮಿಸಿ ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದ ವಸತಿರಹಿತ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.
ಸರ್ಕಾರವು ಕೆಲವು ವರ್ಗಗಳಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದು ಪತ್ರಕರ್ತರಿಗೂ ಇದೇ ರೀತಿ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಪತ್ರಕರ್ತರು ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಸಚಿವರು ರಾಜ್ಯದಲ್ಲಿ ಅನೇಕ ಪತ್ರಕರ್ತರು ಸಂಕಷ್ಟದ ಸ್ಥಿತಿಯಲ್ಲಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಸಚಿವರ ಭೇಟಿ ಸಂದರ್ಭದಲ್ಲಿ ಸಂಸದ ಬಸವರಾಜ್, ಪಾಲಿಕೆ ಮಹಾ ಪೌರರಾದ ಕೃಷ್ಣಪ್ಪ, ನಗರ ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕುಂದರನಹಳ್ಳಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತಿ ಇದ್ದರು.