ಚಿಕ್ಕನಾಯಕನಹಳ್ಳಿ :
2018-19ನೇ ಸಾಲಿಗೆ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ 67.94ಲಕ್ಷರೂ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಶಾಸಕರು, ತಾಲ್ಲೂಕಿಗೆ 2018-19ನೇ ಸಾಲಿನ ರಸ್ತೆಗಳ ನಿರ್ವಹಣೆಗೆ ನಿರ್ವಹಣಾ ಅನುದಾನದ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಕಾಮಗಾರಿಯ ಕ್ರಿಯಾ ಯೋಜನೆ ಪಟ್ಟಿ ತಯಾರಿಸುವ ಬಗ್ಗೆ ಚರ್ಚಿಸಿದರು.
ಸರ್ಕಾರ ನೀಡಿರುವ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತುರ್ತು ಹಾಗೂ ಅಗತ್ಯ ರಸ್ತೆ, ಚರಂಡಿ ಮತ್ತು ಕಾಲುಸಂಕ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಮತ್ತು ಅನುದಾನವನ್ನು ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಉದ್ದಳತೆಗಳಿಗೆ ಅನುಗುಣವಾಗಿ ಸಮನಾಗಿ ಹಂಚಿಕೆ ಮಾಡಬೇಕಾಗಿದೆ ಎಂದ ಅವರು, ಕ್ರಿಯಾ ಯೋಜನೆ ತಯಾರಿಸುವಾಗ ಪ್ರಕೃತಿ ವಿಕೋಪದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿ ಮತ್ತು ಕಾಲುಸಂಕಗಳನ್ನು ತುರ್ತು ದುರಸ್ತಿ ಕೈಗೊಳ್ಳುವುದು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ನಮ್ಮ ಗ್ರಾಮ-ನಮ್ಮ ರಸ್ತೆ ಹಾಗೂ ನಬಾರ್ಡ್ ಯೋಜನೆಯಡಿ ನಿರ್ಮಿಸಿ ನಿರ್ವಹಣಾ ಅವಧಿಯು ಮುಕ್ತಾಯವಾದ ನಂತರ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಲು ಆದ್ಯತೆ ಮೇಲೆ ಆಯ್ಕೆ ಮಾಡುವುದು ಮತ್ತು ದುರಸ್ತಿಗಾಗಿ ಹಂಚಿಕೆ ಮಾಡಿದ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಸರ್ಕಾರ ಆದೇಶಿಸಿದೆ ಎಂದು ಸಭೆಗೆ ಶಾಸಕರು ತಿಳಿಸಿದರು.
ತಾಲ್ಲೂಕಿಗೆ ಬಿಡುಗಡೆಯಾಗಿರುವ 67.94ಲಕ್ಷರೂ ಹಣದಲ್ಲಿ ಡಾಂಬರ್ ರಸ್ತೆ ನಿರ್ವಹಣೆಗೆ 29.56ಲಕ್ಷ, ಜಲ್ಲಿ ರಸ್ತೆ ನಿರ್ವಹಣೆಗೆ 9.63ಲಕ್ಷರೂ, ಮಣ್ಣು ರಸ್ತೆ ನಿರ್ವಹಣೆಗೆ 28.75ಲಕ್ಷರೂವನ್ನು ಸರ್ಕಾರ ಮೀಸಲಿರಿಸಿದೆ.
ಡಾಂಬರ್ ರಸ್ತೆ ನಿರ್ವಹಣೆಯಲ್ಲಿ 29.56ಲಕ್ಷ ಮೀಸಲಿಟ್ಟಿದ್ದು ಅದರಲ್ಲಿ ಶೇ.5ರಷ್ಟು ಅಂಗವಿಕಲರಿಗಾಗಿ 1.48ಲಕ್ಷ ನೀಡಿದರೆ ಉಳಿಕೆ ಮೊತ್ತ 28.08ಲಕ್ಷ ನಿಗಧಿಯಾಗಿದೆ. ಇದರಲ್ಲಿ ಪರಿಶಿಷ್ಠ ಜಾತಿಯ ಕಾಮಗಾರಿಗಳಿಗೆ ಶೇ.18ರಷ್ಟು ಅಂದರೆ 5.05ಲಕ್ಷ, ಪರಿಶಿಷ್ಠ ಪಂಗಡದ ಕಾಮಗಾರಿಗಳಿಗೆ ಶೇ.7ರಷ್ಟು 1.97ಲಕ್ಷರೂ, ಸಾಮಾನ್ಯ ವರ್ಗದ ಕಾಮಗಾರಿಗಳಿಗೆ ಶೇ.75ರಷ್ಟು 21.06ಲಕ್ಷ ನಿಗಧಿಯಾಗಿದೆ ಎಂದರು.
ಜಲ್ಲಿ ರಸ್ತೆ ನಿರ್ವಹಣೆಯ 9.63ಲಕ್ಷರೂ ಹಣದಲ್ಲಿ ಅಂಗವಿಕಲರಿಗೆ 48 ಸಾವಿರ, ಪರಿಶಿಷ್ಠ ಜಾತಿಯ ಕಾಮಗಾರಿಗೆ 1.65ಲಕ್ಷ, ಪರಿಶಿಷ್ಠ ಪಂಗಡದ ಕಾಮಗಾರಿಗೆ 64ಸಾವಿರ, ಸಾಮಾನ್ಯ ವರ್ಗದ ಕಾಮಗಾರಿಗೆ 6.86ಲಕ್ಷ ಹಾಗೂ ಮಣ್ಣು ರಸ್ತೆ ನಿರ್ವಹಣೆಯ 28.75ಲಕ್ಷ ರೂ ಹಣದಲ್ಲಿ ಅಂಗವಿಕಲರಿಗಾಗಿ 1.44ಲಕ್ಷ, ಪರಿಶಿಷ್ಠ ಜಾತಿಯ ಕಾಮಗಾರಿಗಳಿಗೆ 4.92ಲಕ್ಷ, ಪರಿಶಿಷ್ಠ ಪಂಗಡದ ಕಾಮಗಾರಿಗೆ 1.92ಲಕ್ಷ, ಸಾಮಾನ್ಯ ವರ್ಗದ ಕಾಮಗಾರಿಗಳಿಗೆ 20.47ಲಕ್ಷ ನೀಡಲು ತಿಳಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮಂಜುಳ, ರಾಮಚಂದ್ರಯ್ಯ, ಮಹಾಲಿಂಗಯ್ಯ, ವೈ.ಸಿ.ಸಿದ್ದರಾಮಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.