ತುಮಕೂರು:

      ತುಮಕೂರು ನಗರದ ಎಲ್ಲಾ ವಾರ್ಡ್‍ಗಳಲ್ಲಿ ಕೊರೋನಾ ನಿಯಂತ್ರಣ ಕುರಿತು ಜನ ಜಾಗೃತಿ ಮೂಡಿಸಲು ದಯಾಭವನ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ಕೊರೋನಾ ಜಾಗೃತಿ ರಥಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.

      ನಂತರ ಮಾತನಾಡಿದ ಅವರು ಜನರಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

      ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ, ದಯಾಭವನ ಸಂಸ್ಥೆ ನೀಡುತ್ತಿರುವ ಈ ಸೇವೆಯನ್ನು ನಮ್ಮ ಎಲ್ಲಾ ಕಾರ್ಪೊರೇಟರ್‍ಗಳು ಉಪಯೋಗಿಸಿಕೊಂಡು ಅವರ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ಕೊಟ್ಟರು.
ದಯಾಭವನ ಸಂಸ್ಥೆಯ ಮುಖ್ಯಸ್ಥ ಫಾದರ್ ಜಿನೇಶ್ ವರ್ಕಿ ಮಾತನಾಡಿ, ಈಗಾಗಲೇ ಸಂಸ್ಥೆ ವತಿಯಿಂದ ಕುಣಿಗಲ್ ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಜಾಗೃತಿ ರಥದ ಮುಖಾಂತರ ಕೊರೋನಾ ಜಾಗೃತಿ ಮೂಡಿಸಿ ಹಸಿದವರಿಗೆ ಅನ್ನ ನೀಡಲಾಗುತ್ತಿದೆ. ಈ ಸೇವೆಯನ್ನು ತುಮಕೂರು ನಗರಕ್ಕೂ ವಿಸ್ತರಿಸಿದ್ದೇವೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹಾಗೂ ಸ್ವಯಂಸೇವಾ ಸಂಸ್ಥೆಗಳ ನೋಡೆಲ್ ಅಧಿಕಾರಿ ಎಸ್.ನಟರಾಜ್, ಜಿಲ್ಲಾ ನಿರೂಪಣಾಧಿಕಾರಿ ಎಂ.ಎಸ್.ಶ್ರೀಧರ್, ತುಮಕೂರು(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಶಿವಕುಮಾರಯ್ಯ, ದಯಾಭವನ ಸಂಸ್ಥೆಯ ಸಂಚಾಲಕ ರಮೇಶ್ ಹಾಜರಿದ್ದರು.

(Visited 9 times, 1 visits today)