ತುಮಕೂರು :
ಕೋವಿಡ್-19 ಮೂರನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡುತ್ತಾ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಶಿಶು ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ 16 ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಸುಮಾರು 60 ಕ್ಕಿಂತ ಹೆಚ್ಚು ಶಿಶು ವೈದ್ಯರಿದ್ದು ಎಲ್ಲಾ ತಾಲೂಕುಗಳಲ್ಲಿಯೂ ಶಿಶುವೈದ್ಯರ ವ್ಯವಸ್ಥೆ ಮಾಡಲು ಸಿದ್ಧರಾಗಿದ್ದೇವೆ. ಇದಲ್ಲದೆ ಅವಶ್ಯಕತೆಗನುಗುಣವಾಗಿ ಶಿಶು ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಸಿದ್ದಾರ್ಥ ಕಾಲೇಜಿನ 8 ಪಿಜಿ ವಿದ್ಯಾರ್ಥಿಗಳು ಹಾಗೂ ಡಿಎನ್‍ಬಿ ಕೋರ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 3600 ಹಾಸಿಗೆಗಳಿವೆ. ಈ ಪೈಕಿ 528 ಹಾಸಿಗೆಗಳನ್ನು ಪಿಡಿಯಾಟ್ರಿಕ್ ಹಾಸಿಗೆಗಳಿಗೆ ಮೀಸಲಿಡಲಾಗಿದೆ. ಇದರಲ್ಲಿರುವ 118 ಸರ್ಕಾರಿ ಹಾಸಿಗೆಗಳನ್ನು 180ಕ್ಕೆ ಹೆಚ್ಚಿಸಲು ಸಚಿವರು ನಿರ್ದೇಶಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 0-6 ವರ್ಷದ ಮಕ್ಕಳಿಗಾಗಿ ಹಮ್ಮಿಕೊಂಡಿರುವ ನೂತನ ಕಾರ್ಯಕ್ರಮದಡಿ ಈಗಾಗಲೆ ಗುರುತಿಸಿರುವ ಸುಮಾರಿ 8000 ಮಕ್ಕಳು ಅಪೌಷ್ಟಿಕತೆ ಹೊಂದಿರುವ (ಪೂರ್ಣವಾಗಿ ಅಲ್ಲ) ಮಕ್ಕಳ ಮನೆಗಳ ಪೋಷಕರಿಗೆ ತಿಳುವಳಿಕೆ ನೀಡಲು ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲು ನಿರ್ಧಾರ ಮಾಡಲಾಗಿದೆ. ಅಪೌಷ್ಟಿಕ ಮಕ್ಕಳಿಗೆ ಕಿಟ್ ತಯಾರು ಮಾಡಿ ನೀಡಲು ಈಗಾಗಲೇ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳ ತಜ್ಞ ವೈದ್ಯರ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿಯ ನಿರ್ಧಾರದ ಆಧಾರದ ಮೇಲೆ ಮಕ್ಕಳಿಗೆ ಅರಿವು ಮೂಡಿಸಲು ಕ್ರಮವಹಿಸಲಾಗಿದೆ. ಅದೇ ರೀತಿ ರಿವರ್ಸ್ ಕ್ವಾರಂಟೈನ್ ಮಾಡಲು ವ್ಯವಸ್ಥೆ ರೂಪಿಸಲಾಗಿದೆ. ಅಂದರೆ ಅಪೌಷ್ಟಿಕತೆ ಮಕ್ಕಳ ಪೋಷಕರಿಗೆ ಲಸಿಕೆ ನೀಡಿ ಕ್ರಮ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ. 10 ರಿಂದ 13ರೊಳಗೆ ವರದಿಯಾಗುತ್ತಿದೆ. ಶಿರಾ ಮತ್ತು ತಿಪಟೂರು ತಾಲೂಕುಗಳಲ್ಲಿ ಶೇ.15ಕ್ಕಿಂತ ಹೆಚ್ಚು ವರದಿಯಾಗುತ್ತಿದೆ.
ಉಳಿದ ಎಲ್ಲಾ ತಾಲೂಕುಗಳಲ್ಲಿಯೂ 15ಕ್ಕಿಂತ ಕಡಿಮೆ ಬರುತ್ತಿದೆ. ಪ್ರತಿನಿತ್ಯ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಾಗಿ ನಡೆಸಲಾಗುತ್ತಿದ್ದು ಸುಮಾರು 38ವಸಾವಿರದಷ್ಟು ಮೆಡಿಸನ್ ಕಿಟ್ ತಯಾರು ಮಾಡಿಕೊಂಡು ಸೋಂಕು ಕಂಡುಬಂದ ತಕ್ಷಣವೇ ಸೋಂಕಿತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 220 ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳು ಖಾಲಿಯಿದ್ದು. ಹಾಸಿಗೆ ಸಮಸ್ಯೆ ಇಲ್ಲವೇ ಇಲ್ಲ ಎಂದರು.
ಕಲುಷಿತ ನೀರಲ್ಲ : ತಿಪಟೂರಿನಲ್ಲಿ ಕೊಳಚೆ (ಯುಜಿಡಿ) ನೀರು ಹೇಮಾವತಿ ನಾಲೆಗೆ ಸೇರುತ್ತಿದೆ ಎಂದು ವರದಿಯಾಗಿದೆ. ಆದರೆ ಅದು ಯುಜಿಡಿ ನೀರಲ್ಲ. ಮಳೆ ನೀರು ಹೇಮಾವತಿ ನಾಲೆ ಸೇರಿದೆ ಎಂಬ ಮಾಹಿತಿಯನ್ನು ತಿಪಟೂರು ನಗರ ಸಭೆ ಆಯುಕ್ತರು ಖಚಿತಪಡಿಸಿದ್ದಾರೆ.
ಹಾಗಾಗಿ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ಇದಲ್ಲದೆ, ಬುಗುಡನಹಳ್ಳಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರೀಕ್ಷೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೂ ಸೂಚನೆ ನೀಡಿದ್ದೇನೆ. ಸ್ಥಳ ಪರಿಶೀಲನೆಗೂ ನಿರ್ದೇಶಿಸಿದ್ದೇನೆ. ಯುಜಿಡಿ ಮೂಲಕ ಹೇಮಾವತಿ ನಾಲೆಗೆ ಸೇರುತ್ತಿದ್ದ ಮಳೆ ನೀರು ಹೇಮಾವತಿ ನಾಲೆಗೆ ಸೇರದಂತೆ ವ್ಯವಸ್ಥೆ ಮಾಡಲು ಅಲ್ಲಿನ ನಗರ ಸಭೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನಾನೂ ಸಹ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಿಲ್ಲೆಗೆ ಈಗ ಕಾವೇರಿ ನೀರಾವರಿ ನಿಗಮದಿಂದ ಹರಿಯುತ್ತಿರುವುದು ಹೊಸ ನೀರಾಗಿರುವುದರಿಂದ ಮಣ್ಣು ಮಿಶ್ರಿತವಾಗಿ ಕಂಡುಬರುತ್ತಿದೆ. ನೀರಿನ ಶುದ್ಧೀಕರಣವನ್ನು ಸಮರ್ಪಕವಾಗಿ ಆಗುವಂತೆ ಕ್ರಮ ವಹಿಸಲು ಸಂಬಂಧಿಸಿದ ಇಂಜಿನಿಯರ್ ಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯ ಕುಡಿಯುವ ನೀರಿನ ಬೇಡಿಕೆಗೆ ಅನುಗುಣವಾಗಿ ನಿಗಮದಿಂದ ನೀರು ಹರಿಸಲಾಗಿದೆ. ಯಾವುದೇ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದು ತಿಳಿಸಿದರು.