ತುಮಕೂರು:

      ಗ್ರಾಮಾಂತರ ಜನರ ಕಷ್ಟದಲ್ಲಿ ಜೊತೆಯಾಗಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರಂತೆ ಉಳಿದ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

      ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆಯಲ್ಲಿ ಬಡವರಿಗೆ ಹಾಗೂ ಕೊರೋನಾ ವಾರಿಯರ್ಸ್‍ಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ನೆರವಿಗೆ ನಿಲ್ಲಬೇಕಿರುವುದು ಜನಪ್ರತಿನಿಧಿಗಳ ಕೆಲಸ, ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಅವಶ್ಯಕವಿರುವ, ಪಡಿತರ, ಔಷಧವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿರುವ ಗೌರಿಶಂಕರ್ ಅವರ ಕಾರ್ಯ ಮಾದರಿಯಾದದ್ದು ಎಂದರು.

      ಸರ್ಕಾರ ಕೋವಿಡ್ ಕೇರ್‍ಗಳನ್ನು ಮಾತ್ರ ಮಾಡುತ್ತದೆ, ಅದೆಷ್ಟೋ ಕೋವಿಡ್ ಕೇಂದ್ರಗಳು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿವೆ, ಗೌರಿಶಂಕರ್ ಅವರು ಕೋವಿಡ್ ಕೇಂದ್ರವನ್ನು ಸ್ವಂತ ಹಣದಲ್ಲಿ ಆಕ್ಸಿಜನ್ ಸಹಿತ ಕೇಂದ್ರವನ್ನಾಗಿ ಮಾರ್ಪಡಿಸಿರುವುದಲ್ಲದೇ, ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ಒದಗಿಸಿರುವುದು ಶ್ಲಾಘನೀಯ ಎಂದರು.

      ಜಿಲ್ಲೆಯಲ್ಲಿ ಗೌರಿಶಂಕರ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪಕ್ಷದಲ್ಲಿ ಹುದ್ದೆ ದೊರಕಲು ಸಹಕಾರ ನೀಡುವುದಾಗಿ ಹೇಳಿದ ಅವರು, ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಕ್ಷೇತ್ರ ಜನರೊಂದಿಗೆ ಶಕ್ತಿಯಾಗಿ ನಿಂತಿದ್ದು, ಇಂತಹ ಉತ್ತಮ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಹೆಚ್ಚು ನೀಡಲಿ ಎಂದು ಆಶಿಸಿದರು.
ರಾಜ್ಯದಲ್ಲಿರುವ ಜೆಡಿಎಸ್ ಪಕ್ಷದ ಶಾಸಕರು ಕೊರೋನಾ ಸಂದರ್ಭದಲ್ಲಿ ಜನರಿಗೆ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದಾರೆ, ಪಕ್ಷದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಶಾಸಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಜನರ ಸಂಕಷ್ಟಕ್ಕೆ ನೆರವಾಗುವಂತೆ ಕರೆ ನೀಡಿದ್ದಾರೆ, ಇದು ರಾಜ್ಯದೆಲ್ಲೆಡೆಯೂ ನಡೆಯಲಿದೆ ಎಂದರು.

      ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಕೊರೋನಾ ಅಲೆ ಆಘಾತಕಾರಿಯಾಗಿದ್ದು, ಸಾಕಷ್ಟು ಜನ ಸಾವನ್ನಪ್ಪಿದ್ದಾರೆ, ಗ್ರಾಮಾಂತರ ಜನರ ಆರೋಗ್ಯಕ್ಕಾಗಿ ಸರ್ಕಾರದ ಸಹಕಾರದೊಂದಿಗೆ ಕೋವಿಡ್ ಕೇಂದ್ರವನ್ನು ಸ್ಥಾಪಿಸಿ, ವೈಯಕ್ತಿಕ ಹಣದಿಂದ ಅಲ್ಲಿ 32 ಆಕ್ಸಿಜನ್ ಬೆಡ್ ಸ್ಥಾಪಿಸಿ, ಕೋವಿಡ್ ಕೇಂದ್ರದ ನಿರ್ವಹಣೆ ಮಾಡುತ್ತಿದ್ದು, ಕೊರೋನಾ ಮುಗಿಯುವವರೆಗೆ ಅದನ್ನು ಮುಂದುವರೆಸುವುದಾಗಿ ಹೇಳಿದರು.

      ಎರಡನೇ ಅಲೆಗಿಂತ ಮೂರನೇ ಅಲೆ ಭೀಕರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು ಈ ನಿಟ್ಟಿನಲ್ಲಿ ಬಳ್ಳಗೆರೆಯ ಅತಿಥಿಗೃಹವನ್ನೇ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಆಕ್ಸಿಜನ್ ಮತ್ತು ಐಸಿಯು ಬೆಡ್ ಮಾಡಲಾಗುವುದು, ಕೊರೋನಾ ಮೂರನೇ ಅಲೆ ಎದುರಿಸಲು ಗ್ರಾಮಾಂತರ ಕ್ಷೇತ್ರದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದರು.

      ಬಳ್ಳಗೆರೆ ಗ್ರಾಮ ಪಂಚಾಯತಿ ಸೇರಿದಂತೆ ಸುತ್ತಮುತ್ತಲಿನ ಹತ್ತು ಸಾವಿರ ಕುಟುಂಬಗಳಿಗೆ ಇಂದು ಪಡಿತರ, ತರಕಾರಿ, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗುತ್ತಿದ್ದು, ಪಕ್ಷ ಬೇಧವಿಲ್ಲದ ಪ್ರತಿ ಮನೆ ಮನೆಗೂ ಪಡಿತರ ವಿತರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಬೆಳ್ಳಾವಿ, ಗೂಳೂರು, ಬೆಳ್ಳಾವಿ ಪಂಚಾಯತಿ ವ್ಯಾಪ್ತಿಯಲ್ಲಿ ಪಡಿತರ ಮತ್ತು ತರಕಾರಿ ವಿತರಿಸುವ ಕೆಲಸ ಮಾಡುವುದು ಎಂದು ತಿಳಿಸಿದರು.

      ಕಳೆದ ಸುಮಾರು ತೊಂಭತ್ತು ಸಾವಿರ ಕುಟುಂಬಗಳಿಗೆ ಪಡಿತರವನ್ನು ವಿತರಿಸುವ ಕೆಲಸವನ್ನು ಮಾಡಲಾಗಿತ್ತು, ಈ ಬಾರಿ ಮೂವತ್ತು ಸಾವಿರ ಕುಟುಂಬಗಳಿಗೆ ಪಡಿತರ ನೀಡುವ ಉದ್ದೇಶವನ್ನು ಹೊಂದಿದ್ದು, ನಮ್ಮ ನಾಯಕ ಕುಮಾರಸ್ವಾಮಿ ಅವರ ಪ್ರೇರಣೆಯೊಂದಿಗೆ ಅವರ ಮಾರ್ಗದರ್ಶನದಲ್ಲಿಯೇ ಸೇವೆ ಮಾಡುತ್ತಿರುವುದಾಗಿ ಹೇಳಿದರು.
ಗ್ರಾಮಾಂತರ ಕ್ಷೇತ್ರವನ್ನು ಕೊರೋನಾ ಮುಕ್ತ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುತ್ತಿದ್ದು, ಇಂದು ನಗರ ಭಾಗದಂತೆಯೇ ಗ್ರಾಮೀಣ ಪ್ರದೇಶದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಇದಕ್ಕೆ ಗ್ರಾಮಾಂತರ ಜನರಲ್ಲಿ ಮೂಡಿರುವ ಅರಿವು ಕಾರಣ ಎಂದು ಅಭಿಪ್ರಾಯಪಟ್ಟರು.

    ಈ ವೇಳೆ ಮುಖಂಡರಾದ ಪಾಲನೇತ್ರಯ್ಯ, ನರುಗನಹಳ್ಳಿ ವಿಜಯಕುಮಾರ್, ಹೆಗ್ಗರೆ ಆಜಂ, ಸಿರಾಕ್ ರವಿ, ವಿಷ್ಣುವರ್ಧನ್, ಬೈರೇಗೌಡ, ತಿಮ್ಮಪ್ಪಗೌಡ, ಬಳ್ಳಗೆರೆ ರಾಜು, ಬೆಳಗುಂಬ ವೆಂಕಟೇಶ್, ಹರಳೂರು ಸುರೇಶ್, ಯೋಗೀಶ್, ಜಯಂತ್, ಕರೇರಂ ಗಪ್ಪ, ತನ್ವೀರ್, ಹೆತ್ತೇನಹಳ್ಳಿ ಮಂಜುನಾಥ್, ವೆಂಕಟೇಶ್ ಗೌಡ ಇದ್ದರು.

(Visited 6 times, 1 visits today)