ತುಮಕೂರು :
ಕೇಂದ್ರ ಸರಕಾರ ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ವಿವಿಧ ಮಂಚೂಣಿ ಘಟಕಗಳ ಮುಖಂಡರುಗಳು ಪೆಟ್ರೊಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನಾನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ಭಾರತದ ಜನರಿಗೆ ಅಚ್ಚೆ ದಿನದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಕಾರ್ಪೋರೇಟ್ ಪರ ನೀತಿಗಳಿಂದಾಗಿ ಜನಸಾಮಾನ್ಯರು ಬೆಲೆ ಹೆಚ್ಚಳದಿಂದ ಪರದಾಡುವಂತಾಗಿದೆ. 2014ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದರೂ, ಜನಸಾಮಾನ್ಯರ ಮೇಲೆ ಅತಿ ಕಡಿಮೆ ತೆರಿಗೆ ವಿಧಿಸುವ ಮೂಲಕ ಜನಸಾಮಾರಿಗೆ ಕೈಗೆಟುವ ದರದಲ್ಲಿ ಪೆಟ್ರೋಲ್, ಡಿಸೇಲ್ ಸಿಗುವಂತೆ ಮಾಡಿದ್ದರು. ಆದರೆ ಇಂದಿನ ಸರಕಾರ ಅತಿಯಾದ ಸೆಸ್ ವಿಧಿಸುವ ಮೂಲಕ 100 ರೂ ತಲುಪುವಂತೆ ಮಾಡಿದ್ದಾರೆ. ಇದರ ಫಲವಾಗಿ, ದಿನನಿತ್ಯದ ಆಹಾರ ಪದಾರ್ಥ ಗಳ ಬೆಲೆ ಹೆಚ್ಚಿ, ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ದೇಶದಲ್ಲಿ ತೈಲದ ಮೂಲ ಬೆಲೆ 33 ರೂ ಇದೆ. ಆದರೆ ಇದರ ಜೊತೆಗೆ 3.60 ಪೈಸ್ ಶುದ್ದೀಕರಣ ಬೆಲೆ, 32.90 ರೂ ಎಕ್ಸೇಜ್ ಟ್ಯಾಕ್ಸ್ ಹಾಗೂ ಶೇ.30ರಷ್ಟು ವ್ಯಾಟ್ ಸೇರಿ ಇಂದು ನೂರು ರೂಪಾಯಿ ತಲುಪಿದೆ. ಕೇಂದ್ರ ಸರಕಾರ ಅತಿಯಾದ ಸೆಸ್ ಕಡಿಮೆ ಮಾಡುವ ಮೂಲಕ ಪೆಟ್ರೋಲ್, ಡಿಸೇಲ್ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಬೇಕೆಂಬುದು ಕಾಂಗ್ರೆಸ್ ಪಕ್ಷದ ಈ ಪ್ರತಿಭಟನೆಯ ಮೂಲ ಉದ್ದೇಶವಾಗಿದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋ ರಾಜು, ಮೆಹಬೂಬ್ ಪಾಷ, ಸಂಜೀವ್‍ಕುಮಾರ್, ಮಂಚೂಣಿ ಘಟಕಗಳ ಅಧ್ಯಕ್ಷರಾದ ಬಿ.ಜಿ.ನಿಂಗರಾಜು, ಪುಟ್ಟರಾಜು, ಪಾಲಿಕೆ ಸದಸ್ಯ ನಯಾಜ್ ಅಹಮದ್, ಹಿರಿಯ ಉಪಾಧ್ಯಕ್ಷರಾದ ಹೆಚ್.ಸಿ.ಹನುಮಂತಯ್ಯ, ರೇವಣ್ಣ ಸಿದ್ದಯ್ಯ, ಸುಜಾತ, ನಾಗಮಣಿ, ಮಂಗಳ, ಮಂಜುನಾಥ್, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಅಬ್ದುಲ್ ರಹೀಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.