ಹುಳಿಯಾರು:

      ಕೊರೋನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಸರ್ಕಾರ ಕೊರೋನಾ ನಿರ್ಬಂಧ ಸಡಿಸಿಲಿದೆ. ಪರಿಣಾಮ ಹುಳಿಯಾರು ಪಟ್ಟಣಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪಟ್ಟಣ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆ ರಸ್ತೆಯಲ್ಲಿ ಸಂಚರಿಸುವವರಿಗೆ ಕೊರೋನಾ ಪರೀಕ್ಷೆ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಹುಳಿಯಾರಿನ ಪೊಲೀಸ್ ಸ್ಟೇಷನ್ ಸರ್ಕಲ್‍ಗೆ ನಾಲ್ಕು ದಿಕ್ಕಿನ ರಸ್ತೆ ಸೇರುತ್ತದೆ. ಅಲ್ಲದೆ ಹಳ್ಳಿಗಳಿಂದ ಪಟ್ಟಣಕ್ಕೆ ಬರುವವರು ಈ ಸರ್ಕಲ್ ಮೂಲಕ ಓಡಾಡಲೇ ಬೇಕಿದೆ. ಹಾಗಾಗಿ ಸರ್ಕಲ್‍ನಲ್ಲಿ ಬಳಿ ಜನರ ಕೊರೋನಾ ಪರೀಕ್ಷೆಗೆ ಮುಂದಾಗಿದ್ದರು. ಅತ್ತ ಪಪಂ ಸಿಬ್ಬಂದಿ ಬೈಕ್‍ನಲ್ಲಿ ತೆರಳುವವರನ್ನು ನಿಲ್ಲಿಸಿ ಕೊರೋನಾ ಪರೀಕ್ಷೆ ಮಾಡಿಸುವಂತೆ ಸೂಚಿಸುತ್ತಿದ್ದರು. ಇತ್ತ ಆರೋಗ್ಯ ಸಿಬ್ಬಂದಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುತ್ತಿದ್ದರು.

      ಕೊರೋನಾ ಪರೀಕ್ಷೆ ಮಾಡಿಸುವಂತೆ ತಿಳಿಸಿದಾಗ ಕೆಲವರು ಈಗಾಗಲೇ ಮಾಡಿಸಿದ್ದು ನೆಗೆಟಿವ್ ಬಂದಿದೆ ಎಂದು ಮೊಬೈಲ್ ಮೆಸೇಜ್ ತೋರಿಸಿ ತೆರಳುತ್ತಿದ್ದರು. ಇನ್ನೂ ಕೆಲವರು ಟೆಸ್ಟ್ ಸ್ಥಳಕ್ಕೆ ಹೋಗಿ ಸ್ವಲ್ಪ ಸಮಯ ಅಲ್ಲಿದ್ದು ಟೆಸ್ಟ್ ಮಾಡಿಸದೆ ಹಾಗೆಯೇ ಬಂದು ಮಾಡಿಸಿರುವುದಾಗಿ ಸುಳ್ಳೇಳಿ ಹೋಗುತ್ತಿದ್ದರು.

      ಇಂತಹವರ ನಡುವೆ ಅನೇಕರು ಪರೀಕ್ಷೆ ಮಾಡಿಸಲು ಉತ್ಸುಕತೆ ತೋರಿದ್ದು ಆಶಾದಾಯಕವಾಗಿತ್ತು. ಮಧ್ಯಾಹ್ನ 2 ಗಂಟೆಯವರೆವಿಗೂ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿದ್ದು ಒಟ್ಟು 65 ಮಂದಿಯ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿದರು. ಆದರೆ ಕೊರೋನಾ ಪರೀಕ್ಷೆ ನಡೆಯುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಣದಾಗಿತ್ತು. ಪಟ್ಟಣದಲ್ಲಿ ಸಂಚರಿಸಲು ನೆಗೆಟಿವ್ ವರದಿ ಕಡ್ಡಾಯವಲ್ಲವಾದರೂ ಕೊರೋನಾ ಸೋಂಕು ಇಳಿಮುಖವಾಗಿರುವ ಬಗ್ಗೆ ದೃಢಪಡಿಸಿಕೊಳ್ಳಲು ಕೊರೋನಾ ಪರೀಕ್ಷೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

(Visited 6 times, 1 visits today)