ತುಮಕೂರು :
ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವಜೆ.ಸಿ. ಮಾಧುಸ್ವಾಮಿ ರೈತರಿಗೆ ಕರೆ ನೀಡಿದರು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ದುಗಡೀ ಗ್ರಾಮ ಪಂಚಾಯಿತಿ ವ್ಯಾಪ್ತಿ ದುಗಡೀಹಳ್ಳಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಬದು ಮಾಸಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದುಗಡೀಹಳ್ಳಿಯಲ್ಲಿ 50 ಹೆಕ್ಟೇರ್(125 ಎಕರೆ) ಭೂ ಪ್ರದೇಶದಲ್ಲಿ ಕ್ಷೇತ್ರ ಬದು ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪ್ರತಿ ಎಕರೆಗೆ ಸುಮಾರು 18 ಬದುವಿನಂತೆ ಒಟ್ಟು 125 ಎಕರೆ ಭೂ ಪ್ರದೇಶದಲ್ಲಿ 2250 ಬದುಗಳನ್ನು ನಿರ್ಮಾಣ ಮಾಡಬಹುದು. ಇದರಿಂದ ಒಮ್ಮೆ ಉತ್ತಮ ಮಳೆಯಾದರೆ ಸುಮಾರು 1.35 ಲಕ್ಷ ಲೀಟರ್ ನೀರು ಸಂಗ್ರಹಣೆಯಾಗಲಿದ್ದು ರೈತರ ಜಮೀನಿನ ಮಣ್ಣಿನ ಮೇಲ್ಮೈ ಭಾಗ ಸಂಪೂರ್ಣ ಸಂರಕ್ಷಣೆಗೊಳ್ಳಲಿದೆ. ಅಲ್ಲದೆ ಮಳೆ ನೀರು ಸಹ ಸಂರಕ್ಷಣೆಯಾಗಲಿದೆ ಎಂದವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಮಳೆಗಾಲದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹಾಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ಕ್ಷೇತ್ರ ಬದು ಮಾಸಾಚರಣೆಯನ್ನು ಹಮ್ಮಿಕೊಂಡಿದ್ದು, ದುಗಡೀ ಗ್ರಾಮದ ವ್ಯಾಪ್ತಿಯಲ್ಲಿ ಈ ಬಾರಿ 50 ಹೆಕ್ಟೇರ್ ಭೂ ಪ್ರದೇಶದಲ್ಲಿ ಕ್ಷೇತ್ರ ಬದುಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬದುಗಳ ನಡುವೆ ಬೇಸಾಯ ಮಾಡಲು ಅಗತ್ಯ ಗಿಡಗಳನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.
ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವಲ್ಲಿ ಬದುನಿರ್ಮಾಣ ಬಹಳ ಉಪಯುಕ್ತ ವಿಧಾನವಾಗಿದೆ. ಒಬ್ಬ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಂಡರೆ ಒಮ್ಮೆ ಮಳೆಯಾದಾಗ ಸುಮಾರು 54 ಸಾವಿರ ಲೀಟರ್ ನೀರು ಸಂಗ್ರಹಣೆಯಾಗಲಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆಯು ಹೆಚ್ಚಾಗಲಿದೆ. ರೈತನಿಗೆ ಉತ್ತಮ ಇಳುವರಿಯೂ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ, ಉಪನಿರ್ದೇಶಕ ಉಮೇಶ್, ಚಿ.ನಾ.ಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ವಸಂತ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು, ತಾ.ಪಂ. ಸಹಾಯಕ ನಿರ್ದೇಶಕ ಸಿದ್ದರಾಮಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.