ತುಮಕೂರು:

     ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಪದವಿ ಕೋರ್ಸ್‍ಗಳನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾಷಾ ಬೋಧನೆಯನ್ನು ಕೂಡ ನಾಲ್ಕು ವರ್ಷಗಳವರೆಗೆ ಬೋಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಒಕ್ಕೂಟ ಕುಲಪತಿ ಸಿದ್ದೇಗೌಡರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದೆ.

      ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂ ಸೇರಿದಂತೆ ಇತರೆ ಎಲ್ಲಾ ಭಾಷಾ ಬೋಧನೆಯನ್ನು ಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎ ತುಮಕೂರು ವಲಯ ಅಧ್ಯಕ್ಷ ಡಾ.ಒ.ನಾಗರಾಜು, ಒಕ್ಕೂಟದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ, ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ ಮತ್ತು ಖಜಾಂಚಿ ಡಾ. ಶಿವಲಿಂಗಮೂರ್ತಿ ಹೇಳಿದ್ದಾರೆ.

ಜೊತೆಗೆ ಅನ್ಯಶಿಸ್ತುಗಳ ಅಧ್ಯಯನಕ್ಕೂ ಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು ಕಡಿತಗೊಳಿಸಿರುವುದು ವೈಜ್ಞಾನಿಕವಾಗಿ ಸಮರ್ಥನಿಯವಾದುದಲ್ಲ. ಶಿಕ್ಷಣದ ಯಾವುದೇ ಹಂತದಲ್ಲಿ ಭಾಷೆ ಮತ್ತು ಇತರ ಶಿಸ್ತುಗಳ ಕಲಿಕೆಯನ್ನು ಬೇರ್ಪಡಿಸಿ ನೋಡಲಾಗದು ಮತ್ತು ನೋಡಬಾರದು ಕೂಡ ಎಂದು ಒಕ್ಕೂಟದ ಪದಾಧಿಕಾರಿಗಳು ನಿವೇದನೆ ಮಾಡಿಕೊಂಡಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ತರಗತಿಗಳಿಗೆ ಭಾಷಾ ಬೋಧನೆ ಅವಧಿಯನ್ನು ಹೆಚ್ಚಿಸುವ ಬದಲು ಒಂದು ವರ್ಷಕ್ಕೆ ಇಳಿಸಿರುವುದು ಅಘಾತಕಾರಿ ಸಂಗತಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವನ್ನು ಭಗ್ನಗೊಳಿಸಿದಂತಾಗುತ್ತದೆ, ಭಾಷಾ ಅಧ್ಯಾಪಕರಿಗೆ ಕಾರ್ಯಾಭಾರದ ಕೊರತೆ ಉಂಟಾಗುತ್ತದೆ. ನಾಲ್ಕು ವರ್ಷಗಳ ಕಾಲ ಭಾಷಾ ಬೋಧನೆಗೆ ಅವಕಾಶ ಕಲ್ಪಿಸಬೇಕು. ಸಮಯ ನಿಗದಿ ಮಾಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

(Visited 8 times, 1 visits today)