ತುಮಕೂರು :
ಕೋವಿಡ್ ಮೊದಲನೇ ಲಸಿಕೆ ಪಡೆದು 84 ದಿನ ಪೂರೈಸಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಸಾರ್ವಜನಿಕರು ಸೇರಿದಂತೆ 21592 ಫ್ರಂಟ್‍ಲೈನ್ ಹಾಗೂ ಹೆಲ್ತ್ ಕೇರ್ ವರ್ಕರ್ಸ್‍ಗಳಿಗೆ ಆದ್ಯತೆ ಮೇರೆಗೆ ಶನಿವಾರ ಮತ್ತು ಭಾನುವಾರದಂದು ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದಿಂದ ಲಸಿಕೆ ಪೂರೈಕೆಯಾಗಲಿದ್ದು, ಶನಿವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ. ಹಾಗಾಗಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 574781 ಮೊದಲ ಡೋಸ್, 123577 ಎರಡನೇ ಡೋಸ್ ಸೇರಿ ಸುಮಾರು 7 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಹೆಲ್ತ್‍ಕೇರ್ ವರ್ಕರ್ಸ್‍ಗಳಿಗೆ 22222 ಮೊದಲ ಡೋಸ್, 17000 ಎರಡನೇ ಡೋಸ್; ಫ್ರಂಟ್ ಲೈನ್ ವರ್ಕರ್ಸ್‍ಗೆ 19431 ಮೊದಲನೇ ಡೋಸ್, 8560 ಎರಡನೇ ಡೋಸ್; 18 ರಿಂದ 44 ವರ್ಷದೊಳಗಿನವರಿಗೆ 84032 ಮೊದಲನೇ ಡೋಸ್ ನೀಡಲಾಗಿದ್ದು, ಎರಡನೇ ಡೋಸ್ ಇನ್ನೂ ಯಾರಿಗೂ ನೀಡಿಲ್ಲ. ಉಳಿದಂತೆ 45 ವರ್ಷದಿಂದ 60 ವರ್ಷದೊಳಗಿನವರಿಗೆ 251318 ಮೊದಲ ಡೋಸ್, 38472 ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 198778 ಮೊದಲನೇ ಡೋಸ್, 59545 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಮತ್ತು ಎರಡನೇ ಡೋಸ್ ಎರಡೂ ಸೇರಿ ಚಿಕ್ಕನಾಯನಕಹಳ್ಳಿಯಲ್ಲಿ 53732, ಗುಬ್ಬಿ-65824, ಕೊರಟಗೆರೆ-41745, ಕುಣಿಗಲ್-54730, ಮಧುಗಿರಿ-60296, ಪಾವಗಡ-48636, ಶಿರಾ-69541, ತಿಪಟೂರು-64269, ತುಮಕೂರು189364, ತುರುವೇರೆಕೆರೆಯಲ್ಲಿ 50222 ಡೋಸ್ ಲಸಿಕೆ ವಿತರಿಸಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಶೇ.57ರಷ್ಟು ಹಾಗೂ 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪುಗಳಿಗೆ ಶೇ.7ರಷ್ಟು ಲಸಿಕಾಕರಣ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಗರಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು ಲಸಿಕಾಕರಣ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಗ್ರಾಮೀಣ ಜನರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಲಸಿಕೆ ಪಡೆಯಲು ಹತ್ತಿರದ ಪಿಎಚ್‍ಸಿಗಳಲ್ಲಿ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಾಗಿ ಲಸಿಕಾಕರಣ ಕಾರ್ಯ ಗ್ರಾಮೀಣ ಭಾಗದಲ್ಲಿಯೂ ನಡೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಚಿಕ್ಕನಾಯಕನಹಳ್ಳಿಯಲ್ಲಿ1384, ಗುಬ್ಬಿ-2668, ಕೊರಟಗೆರೆ-1440, ಕುಣಿಗಲ್-1684, ಮಧುಗಿರಿ-1950, ಪಾವಗಡ-1561, ಶಿರಾ- 2346, ತಿಪಟೂರು-2009, ತುಮಕೂರು-5263 ಹಾಗೂ ತುರುವೇಕೆರೆಯಲ್ಲಿ 1323 ಸೇರಿ ಒಟ್ಟು 21592 ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿದ್ದಾರೆ. ಇವರೆಲ್ಲರಿಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿ ಲಸಿಕೆ ನೀಡಬೇಕು ಎಂದು ನಿರ್ದೇಶಿಸಿದರು.
ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಬೇಕು ಮತ್ತು ಸಾಕಾಗುವಷ್ಟು ಸರ್ಕಾರದಿಂದ ಸರಬರಾಗಲಿರುವ ಲಸಿಕೆಯನ್ನು ಒದಗಿಸಬೇಕು. ತಾಲೂಕು ಮಟ್ಟದಲ್ಲಿ ತಂಡ ರಚಿಸಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಿ ಲಸಿಕೆ ತೆಗೆದುಕೊಳ್ಳಲು ಮನವೊಲಿಸಬೇಕು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಫಲಾನುಭವಿಗಳನ್ನು ಲಸಿಕಾಕರಣಕ್ಕೆ ಸಜ್ಜುಗೊಳಿಸಬೇಕು. ಎರಡನೇ ಡೋಸ್ ಪಡೆಯಬೇಕಿರುವ ಎಲ್ಲಾ ಅರ್ಹರಿಗೆ ಜಿಲ್ಲಾ ಮಟ್ಟದಿಂದ ಮಾಹಿತಿ ಸಂದೇಶ ಹಾಗೂ ದೂರವಾಣಿ ಮೂಲಕ ಮಾಹಿತಿ ನೀಡಿ ಲಸಿಕಾಕರಣ ಯಶಸ್ವಿ ಗೊಳಿಸಬೇಕು. ಹೆಚ್ಚುವರಿಯಾಗಿ ಆಪ್ತಮಿತ್ರ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು. ಆಪ್ತಮಿತ್ರ ಸಿಬ್ಬಂದಿಗಳು ಆರ್‍ಸಿಹೆಚ್ ಅಧಿಕಾರಿಗಳಿಂದ ಯಾವ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಯಾವ ಲಸಿಕೆಯ ಎಷ್ಟು ಡೋಸ್‍ಗಳು ಲಭ್ಯವಿದೆ ಎಂಬ ಮಾಹಿತಿ ಪಡೆದು ಫಲಾನುಭವಿಗಳಿಗೆ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಹೆಚ್ಚಿನ ರೈತರು ಬೆಳೆ ಯೋಜನೆ ಲಾಭ ಪಡೆದುಕೊಳ್ಳಬೇಕು. ಬೀಜ ಮತ್ತು ಗೊಬ್ಬರವನ್ನು ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಿಲ್ಲ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಲಾಗುವುದು. ರೈತರು ಸೌಲಭ್ಯ ಪಡೆಯುವ ವೇಳೆ ಕೋವಿಡ್ ನಿಯಮಾವಳಿ ಮರೆಯಬಾರದು. ಬಿತ್ತನ ಬೀಜ ವಿತರಣೆಯಲ್ಲಿ ಕಳಪೆ ಗುಣಮಟ್ಟದ ಬೀಜವೆಂದು ಸಂಶಯ ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಪರವಾನಗಿ ಇಲ್ಲದೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವಂತಿಲ್ಲ. ಇದಲ್ಲದೆ, ಲೂಸ್(ಪ್ಯಾಕೇಟ್ ಓಪನ್ ಮಾಡಿ ಮಾರಾಟ ಮಾಡುವುದು) ಬಿತ್ತನೆ ಬೀಜ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತಸಂಪರ್ಕ ಕೇಂದ್ರ, ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಈ ವೇಳೆ ಕೋವಿಡ್ ನಿಯಮಾವಳಿಗಳಾದ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಿಲ್ಲ. ಪೂರ್ವ ಮುಂಗಾರು ಕಾರ್ಯಕ್ಕೆ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭವಾಗುತ್ತಿದೆ. ಬೆಳೆ ಸಮೀಕ್ಷೆ ಆಪ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಕೆಕಿಸಾನ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳದಿದ್ದರೆ ನೋಂದಣಿ ಮಾಡಿಸಿಕೊಂಡು ಫ್ರೂಟ್ ಐಡಿ ಪಡೆಯಬೇಕು. ಇದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಅನುವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಧಿಕಾರಿ ಅಜಯ್ ಸ್ಭೆರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.