ತುಮಕೂರು:

     ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಅಡಿಯಲ್ಲಿ 200ಕ್ಕೂ ಹೆಚ್ಚು ರೈತಕೂಲಿಕಾರರ ಸಂಘಟನೆಗಳು ದೆಹಲಿಯಲ್ಲಿ ನಡೆಸಿದ ನವೆಂಬರ್ 29 ಮತ್ತು 30ರ ಹೋರಾಟವನ್ನು ಬೆಂಬಲಿಸಿ ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ರೈತ-ಕಾರ್ಮಿಕ, ವಿದ್ಯಾರ್ಥಿ-ಯುವಜನ, ಕಲಾವಿದರು ಒಳಗೊಂಡಂತೆ ಪ್ರತಿಭಟನೆ ನಡೆಸಲಾಯಿತು.

      ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಸತ್ ವಿಶೇಷ ಅಧಿವೇಶನವನ್ನು ಕರೆದು ಮೋದಿಯವರು ಚುನಾವಣೆಗೆ ಮುಂಚೆ ನೀಡಿದ ಭರವಸೆಯ ಭಾಗವಾಗಿ ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇಕಡ 50ರಷ್ಟು ಲಾಭದ ಖಾತ್ರಿ ಕಾನೂನು, ರೈತಸ್ನೇಹಿ ವಿಮಾ ಯೋಜನೆ, ಕೃಷಿ ಅಭಿವೃದ್ಧಿಗೆ ಮಾಡಿರುವ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಸಾಲಮುಕ್ತಿ ಕಾಯಿದೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಒತ್ತಾಯಿಸಲಾಯಿತು.

      ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಕೆ.ದೊರೈರಾಜ್ ಅವರ ಭರವಸೆಗಳಿಂದಲೇ ಜನರ ಬದುಕನ್ನು ಉಳಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಬದಲು ಜನರ ಐಕ್ಯತೆಯನ್ನು ಒಡೆಯುವುದಕ್ಕೆ ತಮ್ಮ ಅಧಿಕಾರವನ್ನು ಮೀಸಲಿಟ್ಟಂತೆ ಕಾಣುತ್ತಿದೆ. 2019ರ ಚುನಾವಣೆ ಸಮೀಪಿಸುತ್ತಿದ್ದು ವಿಶೇಷ ಅಧಿವೇಶನ ಕರೆದು ರೈತ-ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಈಗಲಾದರೂ ಮುಂದಾಗಬೇಕು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ಎಲ್ಲಾ ವಿಭಾಗದ ಜನರ ಬೆಂಬಲವನ್ನು ಪಡೆದು ಐತಿಹಾಸಿಕ ಹೋರಾಟವಾಗಿರುವುದನ್ನು ಮೋದಿಯು ಮನಗಂಡು ಆದ್ಯತೆ ನೀಡಬೇಕೆಂದರು.

     ಎಐಕೆಎಸ್ ಪರವಾಗಿ ಮಾತನಾಡಿದ ಕಂಬೇಗೌಡ ವಿದೇಶ ಸುತ್ತಾಟದಲ್ಲಿ ತೊಡಗಿ ಹುಸಿ ಭರವಸೆಗಳನ್ನು ಮೋದಿ ಸರ್ಕಾರ ನೀಡುವುದನ್ನು ಮೊದಲು ನಿಲ್ಲಿಸಬೇಕು. ಜನರ ಸಮಸ್ಯೆಗಳು ಪರಿಹರಿಸಿ ದೇಶದ ಅಭಿವೃದ್ದಿಗೆ ಹೆಚ್ಚು ಗಮನ ಕೊಡಬೇಕೆಂದರು.
ಸಾಮಾಜಿಕ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರದೆ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿ ಜಾರಿಗೆ ತರಲು ಸಾಧ್ಯವೆಂದು ಹೇಳಿ ರೈತರಿಗೆ ದ್ರೋಹ ಮಾಡಲಾಗಿದೆ. ಆತ್ಮಹತ್ಯೆಗಳು ಮುಂದುವರಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಸಾವುಗಳನ್ನು ಸಹ ಮೋದಿ ಆಡಳಿತದಲ್ಲಿ ದಾಖಲಾಗುತ್ತಿಲ್ಲ. ಕೃಷಿ ಉತ್ಪನ್ನಕ್ಕೆ ಲಾಭದಾಯಕ ಕಾಯಿದೆಯನ್ನು ತಂದು ಎಪಿಎಂಸಿಗಳಲ್ಲಿ ಅವುಗಳನ್ನು ಸಂಗ್ರಹಿಸುವ ವ್ಯವಸ್ಥೆ ಬಂದರೆ ಮಾತ್ರ ರೈತರ ಉಳಿವು ಸಾಧ್ಯವೆಂದರು.

      ಕೃಷಿಕ ಸಮಾಜ ನವದೆಹಲಿ ಮುಖಂಡ ಸುರೇಶ್ ಮಾತನಾಡಿ ಹಳ್ಳಿಗಳು ವೃದ್ಧಾಶ್ರಮವಾಗುವುದನ್ನು ತಪ್ಪಿಸಿ ರೈತರ ಸಂಕಷ್ಟಗಳ ಪರಿಹಾರಕ್ಕೆ ಪ್ರಧಾನಿಗಳು ಮುಂದಾಗಬೇಕೆಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಇಂದು ರಾಜ್ಯಾದ್ಯಂತ ಸಂಘಟನೆಗಳು ದೆಹಲಿಯ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯ ಭಾಗವಾಗಿ ರೈತರ ಸಮಸ್ಯೆಗಳ ಪರಿಹಾರವೇ ಎಲ್ಲಾ ಸಮಸ್ಯೆಗಳ ಪರಿಹಾರವಾದಂತೆ. ಆದ್ದರಿಂದ ಕೃಷಿಯ ಬಿಕ್ಕಟ್ಟುಗಳಿಗೆ ಆರ್ಥಿಕ ನೀತಿಗಳೇ ಪ್ರಮುಖವಾಗಿದ್ದು ಅವುಗಳನ್ನು ಸರಿಯಾಗಿ ಜಾರಿ ಮಾಡದಿದ್ದರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಲಾಭಕ್ಕಿಂತ ನಷ್ಟವೇ ಆಯಿತು. ವಿಮಾ ಕಂತುಗಳನ್ನು ಕಟ್ಟಿಸಿಕೊಂಡ ಕಾರ್ಪೋರೇಟ್ ಕಂಪನಿಗಳು ರೈತರ ಹಣವನ್ನು ದೋಚಲು ಅವಕಾಶ ಕೊಟ್ಟಂತಾಗಿದೆ. ಇಂತಹ ತಪ್ಪು ನೀತಿಗಳನ್ನು ಸರಿಪಡಿಸುವ ಭಾಗವಾಗಿ ಸಂಸತ್ ಅಧಿವೇಶನವನ್ನು ತಕ್ಷಣವೇ ನಡೆಸಬೇಕಾಗಿದೆ ಎಂದರು.

      ಕಲಾವಿದರಾದ ದೇವರಾಜ್ ಮೆಳೇಹಳ್ಳಿ ಮಾತನಾಡಿ, ದೇವರುಗಳು, ಪ್ರತಿಮೆಗಳ ನಿರ್ಮಾಣದಲ್ಲಿ ಸಾವಿರಾರು ಕೋಟಿ ಹಣ ವ್ಯಯವಾಗುತ್ತಿದೆ. ಇಂತಹ ಹಣವನ್ನು ಗ್ರಾಮ ರಾಜ್ಯಗಳನ್ನು ಕಟ್ಟಲು ಬಳಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಪಕ್ಷz ಕಾರ್ಯದರ್ಶಿ ಗಿರೀಶ್, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ, ಬಿ.ಉಮೇಶ್, ಎಐಕೆಎಸ್ ಶಶಿಕಾಂತ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿದರು.

      ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘದ ರವೀಶ್, ಸಿಐಟಿಯು ಮುಖಂಡ ಸೈಯದ್ ಮುಜೀಬ್, ಲೋಕೇಶ್, ಶಂಕರಪ್ಪ ಎಐಟಿಯುಸಿ ಮುಖಂಡರಾದ ಸೀನಪ್ಪ, ಅಶ್ವತ್ಥನಾರಾಯಣ ವಹಿಸಿದ್ದರು.

(Visited 19 times, 1 visits today)