ತುಮಕೂರು :
ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐಸಿಟಿ ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಹಾಗೂ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಟ್ಯಾಬ್ಲೆಟ್ ಅನ್ನು ಶಿಕ್ಷಣಕ್ಕೆ ಮಾತ್ರ ಉಪಯೋಗಿಸಬೇಕೇ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ಶಿಕ್ಷಣವು ಜವಾಬ್ದಾರರನ್ನಾಗಿ, ಶಕ್ತಿಯುತರನ್ನಾಗಿ ಮಾಡುತ್ತದೆ. ಈ ದಿಕ್ಕಿನಲ್ಲಿ ಮಕ್ಕಳು ಬೆಳೆಯಬೇಕು. ಶ್ರಮಪಡಬೇಕು. ಸಾಧನೆಗೆ ಅನುಕೂಲಕರ ಸಾಧನಗಳು ಮುಖ್ಯ. ಈ ನಿಟ್ಟಿನಲ್ಲಿ ಟ್ಯಾಬ್ಲೆಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಹೊಸತನವನ್ನು ಹುಡುಕುವ ತವಕ ರೂಡಿಸಿಕೊಳ್ಳಬೇಕು. ಇರುವ ಜ್ಞಾನದ ಜೊತೆಗೆ ಮತ್ತಷ್ಟು ಪೂರಕವಾದುದನ್ನು ಸೇರಿಸಿಕೊಂಡು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು. ವಿಶ್ಲೇಷಣೆ ಮಾಡುವುದನ್ನೂ ಬೆಳೆಸಿಕೊಳ್ಳಬೇಕು. ಒಂದೇ ಪುಸ್ತಕ, ಒಂದೇ ವಿಚಾರಕ್ಕೆ ಜ್ಞಾನ ಹೆಚ್ಚಿಸಿಕೊಳ್ಳುವ ಬದಲು ಬೇರೆ ಬೇರೆ ಮೂಲಗಳಿಂದ ಜ್ಞಾನಾರ್ಜನೆ ವೃದ್ಧಿ ಮಾಡಿಕೊಂಡರೆ ನೈಜ ಅರಿವು ಬೆಳೆಯುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾದ ಜ್ಞಾನ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಹಿಂದುಳಿಯಬೇಕಾಗುತ್ತದೆ. ಗೋಡೆಗಳು, ಬೋರ್ಡ್‍ಗಳು ಜ್ಞಾನ ಕಲಿಸಲ್ಲ. ಹಾಗಾಗಿ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು. ಹೊಸತನವನ್ನು ಕಲಿಸಬೇಕು. ಕಲಿಕೆಗೆ ಮಕ್ಕಳನ್ನು ತೊಡಗಿಸಿದರೆ ಮಕ್ಕಳು ಬುದ್ದಿವಂತರಾಗುತ್ತಾರೆ. ಅದಕ್ಕೆ ಪೂರಕವಾದ ಮಾಹಿತಿಯನ್ನು ಸಂಗ್ರಹ ಮಾಡಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಯಾರೂ ಬೊಟ್ಟು ಮಾಡಿ ತೋರಿಸುವುದಿಲ್ಲ. ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಯನ್ನು ನಾನಾ ತರದಲ್ಲಿ ಪ್ರಶ್ನಿಸಿ ಬೊಟ್ಟು ಮಾಡುತ್ತಾರೆ. ಅಂಕಗಳ ಆಧಾರದ ಮೇಲೆ ಬೌದ್ಧಿಕ ಶಕ್ತಿ ಅಳೆಯುವ ದುಸ್ಥಿತಿಯಿಲ್ಲಿ ನಾವಿದ್ದೇವೆ. ಪಠ್ಯವನ್ನು ಅರ್ಥ ಮಾಡಿಕೊಂಡು ಅವಲೋಕನ ಮಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ಇದಕ್ಕಿಂತ ದೊಡ್ಡ ಗುರು ಮತ್ಯಾರೂ ಇರುವುದಿಲ್ಲ ಎಂದು ಹೇಳಿದರು.
ಟ್ಯಾಬ್ಲೆಟ್ ಅನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜ್ಞಾನಾರ್ಜನೆ ಮಾಡಿಕೊಂಡರೆ ಸಾಧನೆಯ ಶಿಖರವನ್ನೇರಬಹುದು. ಇಂದು ಜ್ಞಾನಕ್ಕಿರುವ ಶಕ್ತಿ ಮತ್ಯಾವುದೇ ಸಂಪತ್ತಿಗಿಲ್ಲ. ಹಾಗಾಗಿ ಜ್ಞಾನದ ಸಂಪತ್ತಿಗೆ ಹೆಚ್ಚು ಒತ್ತು ಕೊಡಿ. ಇದರಿಂದ ಭವಿಷ್ಯದ ಜೀವನದಲ್ಲಿ ಎಲ್ಲಾ ಸಂಪತ್ತನ್ನು ವಿದ್ಯೆ ತಂದು ಕೊಡುತ್ತದೆ. ವಿದ್ಯೆಯೆಂಬ ಸಂಪತ್ತು ನಮ್ಮ ಬಳಿ ಇದ್ದರೆ ಎಲ್ಲಾ ಸಂಪತ್ತೂ ನಮ್ಮಲ್ಲಿಗೆ ಬರುತ್ತದೆ ಎಂದರು.
ವಿದ್ಯಾರ್ಥಿಗಳು ಈಗಿನಿಂದಲೇ ಸಾಧನೆಯ ಮೆಟ್ಟಿಲನ್ನು ಹತ್ತಲು ಪ್ರಾರಂಭಿಸಬೇಕು. ಹತ್ತಲು ಆರಂಭಿಸಿದರೆ ಬೆಟ್ಟದಂತಹ ಸಾಧನೆ ಸುಲಭವಾಗಿ ದಕ್ಕುತ್ತದೆ. ಅದಕ್ಕೆ ಮೊದಲು ಅಹಂ ಬಿಟ್ಟು ಕಲಿಕೆಯಲ್ಲಿ ತೊಡಗಬೇಕು. ನಾನಿನ್ನೂ ವಿದ್ಯೆಯ ಕಲಿಕೆ ಹಾದಿಯಲ್ಲಿ ನಡೆಯುವ ದೂರ ಬಹಳಷ್ಟಿದೆ ಎಂದು ಮುನ್ನಡೆಯಬೇಕು. ವೃತ್ತಿ ಶಿಕ್ಷಣಕ್ಕಿಂತ ಸಾಮಾನ್ಯ ಜ್ಞಾನ ಬಹಳ ಮುಖ್ಯ. ಸಾಮಾನ್ಯ ಜ್ಞಾನ ಕಲಿಕೆಗೆ ಮಿತಿಯಿಲ್ಲ. ಸಾಮಾನ್ಯ ಜ್ಞಾನ ವೃದ್ಧಿಯಾದರೆ ಬದುಕು ನಾವಂದು ಕೊಂಡಂತೆ ಇರುತ್ತದೆ. ಜೀವನ ನಮ್ಮನ್ನು ಹೇಗೆ ಕರೆದೊಯ್ಯತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವಕಾಶ ಸಿಕ್ಕಾಗ ನಮಗೂ ಸಾಮಥ್ರ್ಯ ಇದೆ ಎಂಬ ಧೈರ್ಯ ನಮ್ಮಲ್ಲಿರಬೇಕು. ಇದಕ್ಕೆ ಹೆಚ್ಚು ಕಲಿಯಬೇಕು. ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜು ನಡೆಸಬಾರದು ಎಂದು ಹೇಳಲಾಗಿದೆಯೇ ಹೊರತು ಓದಬಾರದು ಎಂದು ಹೇಳಿಲ್ಲ. ಹೆಚ್ಚು ಓದಿ ಜ್ಞಾನ ಸಂಪಾದಿಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದಬೇಕು. ಶ್ರಮದ ಪರಿಚಯವಿದ್ದವರು ಸಾಧನೆಯ ಮೈಲುಗಲ್ಲಾಗಿ ನಿಲ್ಲಬಹುದು. ಬೇರೆಯವರಿಗಿಂತ ಜಾಸ್ತಿ ಓದಬೇಕು. ಅಭ್ಯಾಸ ಮಾಡಿ ಶ್ರಮ ಪಟ್ಟರೆ ಸ್ವರ್ಧೆಯಲ್ಲಿ ನಾವು ಮುಂದಿರುತ್ತೇವೆ. ಆಗ ಹಿಂದಿನ ಸೋಲು, ಅವಮಾನಗಳೆಲ್ಲಾ ಮರೆತು ಹೋಗುತ್ತದೆ ಎಂದು ಸಲಹೆ ನೀಡಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಅವಶ್ಯಕ. ಈ ಹಿನ್ನೆಲೆಯಲ್ಲಿ ಸರ್ಕಾರ ಉಚಿತವಾಗಿ ಟ್ಯಾಬ್ಲೆಟ್ ವಿತರಿಸಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾಲಹರಣ ಮಾಡುವುದಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು. ದಾರಿ ತಪ್ಪಿಸುವ ಸಾಧನವಾಗಬಾರದು. ಶೈಕ್ಷಣಿಕ ಗುಣಮಟ್ಟಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಲೀಡ್ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್. ಜಗದೀಶ್ ಮಾತನಾಡಿ, ಕೋವಿಡ್‍ನಿಂದಾಗಿ ಶಿಕ್ಷಣ ಕ್ಷೇತ್ರ ಊಹಿಸಲು ಸಾಧ್ಯವಾದ ಪೆಟ್ಟು ತಿಂದಿದೆ. ಶೈಕ್ಷಣಿಕ ವರ್ಷಗಳನ್ನೇ ಬುಡಮೇಲು ಮಾಡಿದೆ. ಇಂತಹ ಸಂದರ್ಭದಲ್ಲಿ ಅಂಗೈಯಲ್ಲಿಯೇ ಸಿಗುವಂತಹ ಶೈಕ್ಷಣಿಕ ಮತ್ತು ತಾಂತ್ರಿಕತೆಯಿಂದ ಕೂಡಿದ ಮಹತ್ವಾಕಾಂಕ್ಷೆ ಯೋಜನೆಯನ್ನು ಸರ್ಕಾರ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ನೀಡಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 5927 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲಾಗಿದ್ದು, ಸಾಂಕೇತಿಕವಾಗಿ ಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ. ಇದರಿಂದ ಉನ್ನತ ಶಿಕ್ಷಣದ ಬೋಧನೆ ಮತ್ತು ಕಲಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಬಿ.ಆರ್.ಲೀಲಾವತಿ, ಸ.ಪ್ರ.ದ.ಕಾ. ಅರ್ಥಶಾಸ್ತ್ರ ಮುಖ್ಯಸ್ಥ ಡಾ.ಜಿ. ತಿಪ್ಪೇಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐಸಿಟಿ ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಅಲ್ಲಿನ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಜಿಲ್ಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.