ಚಿಕ್ಕನಾಯಕನಹಳ್ಳಿ :
ಕೊರೋನಾ ಸಮಯದಲ್ಲಿ ಉಂಟಾದ ಆಮ್ಲಜನಕ ಕೊರತೆಯನ್ನು ನೀಗಿಸಲು ಜಿಲ್ಲೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮಾಡುತ್ತಿದ್ದು ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ಆಮ್ಲಜನಕ ಘಟಕ ಆರಂಭಿಸುತ್ತಾ ಕೊರೋನಾ 3ನೇ ಅಲೆಗೆ ಜಿಲ್ಲೆಯಲ್ಲಿ ಮುಂಜಾಗೃತವಾಗಿ ಸಜ್ಜಾಗುತ್ತಿದ್ದೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕದ ಆರಂಭದ ವೇಳೆ ಮಾತನಾಡಿದ ಸಚಿವರು, ಚಿಕ್ಕನಾಯಕನಹಳ್ಳಿ ಘಟಕ 500ಲೀ, ತಿಪಟೂರಿನಲ್ಲಿ 400ಲೀ ಹಾಗೂ ಶಿರಾದಲ್ಲಿ 400 ಲೀಟರ್ ಆಮ್ಲಜನಕ ಘಟಕವನ್ನು ಮಾಡುತ್ತಿದ್ದೇವೆ, ತುಮಕೂರು ಜಿಲ್ಲಾ ಆಸ್ಪತ್ರೆಗೆ 1 ಸಾವಿರ ಲೀಟರ್ ನೀಡಲಾಗಿದೆ, ಖಾಸಗಿಯವರ ನೆರವಿನೊಂದಿಗೆ ಕೊರಟಗೆರೆ, ತುರುವೇಕೆರೆ, ಕುಣಿಗಲ್ ನಲ್ಲಿ ಆಮ್ಲಜನಕ ಘಟಕ ಬರುತ್ತಿದೆ ಎಂದರಲ್ಲದೆ, ಪಾವಗಡ ತಾಲ್ಲೂಕಿನಲ್ಲಿ ಮೊದಲೇ 100 ಲೀ ಸಾಮರ್ಥ್ಯದ ಘಟಕವಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ವಿದ್ಯಾಕುಮಾರಿ, ಡಿಹೆಚ್ ಓ ನಾಗೇಂದ್ರಪ್ಪ, ಡಿವೈಎಸ್ಪಿ ಚಂದನ್ ಕುಮಾರ್, ಉಪವಿಭಾಗಾಧಿಕಾರಿ ದಿಗ್ವಜಯ್ ಸಿಂಗ್ ಬೋಡ್ಕೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ನವೀನ್, ತಾಲ್ಲೂಕು ಆಡಳಿತಾಧಿಕಾರಿ ಡಾ.ವಿಜಯ್ ಭಾಸ್ಕರ್ ಮತ್ತಿತರರು ಇದ್ದರು.