ತುಮಕೂರು:

ಪ್ರಧಾನಿ ನರೇಂದ್ರ ಮೋದಿಯವರು ಜನರನ್ನ ಮೂರ್ಖರನ್ನಾಗಿಸಿದ್ದಾರೆ. ಸಬ್ಕಾ ವಿಕಾಸ್ ಹೆಸರಲ್ಲಿ ಯಾರ ವಿಕಾಸ ಮಾಡಲು ಹೊರಟಿದ್ದಾರೆಂಬುದು ತಿಳಿಯುತ್ತಿಲ್ಲ.ಈಗಾಗಲೇ ದಿನನಿತ್ಯದ ಗೃಹ ಬಳಕೆ ವಸ್ತುಗಳು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯು ಬಡಜನರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿವೆ. ದೀನ ದಲಿತರ, ರೈತರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಗೋಮುಖ ವ್ಯಾಘ್ರದಂತಾಗಿವೆ. ಜನರು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಭೀಕರ ಸ್ವರೂಪ ಪಡೆದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಸಿದೆ. ಕಷ್ಟದಲ್ಲಿ ಇರುವವರಿಗೆ ಮತ್ತಷ್ಟು ಕಷ್ಟ ಕೊಡುತ್ತಿದೆ. ಕಷ್ಟದಲ್ಲಿರುವ ಜನತೆಯ ಸಮಸ್ಯೆ ಆಲಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್, ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆ ನೀತಿಯನ್ನು ಹಿಂಪಡೆದು ಜನರ ಹಿತ ಕಾಪಾಡಬೇಕು. ಪಿಎಂ ಕೇರ್ಸ್ ಫಂಡ್ ಬಗ್ಗೆ ಲೆಕ್ಕ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಎಲ್ಲಿಂದ ಹಣ ಹರಿದು ಬಂತು ಮತ್ತು ಯಾವ ಕಾರಣಕ್ಕೆ ಖರ್ಚಾಯಿತು ಎಂಬ ಲೆಕ್ಕವನ್ನೇ ನೀಡದೆ ಸಂವಿಧಾನ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ.
ನೆರೆಯ ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಎರಡರ ಬೆಲೆ ಪ್ರತಿ ಲೀಟರ್‍ಗೆ ನೂರರ ಗಡಿ ದಾಟಿದೆ.
ಅಂಬಾನಿ, ಅದಾನಿಯವರ ಆಸ್ತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋವಿಡ್ ಲಾಕ್‍ಡೌನ್‍ನಿಂದ ಜನಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಖರ್ಚಿಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕಾದ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಸಿ ಬರೆ ಎಳೆಯುತ್ತಿದೆ. ಕೂಡಲೇ ಬೆಲೆ ಇಳಿಕೆ ಮಾಡದಿದ್ದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು. ನಗರದ ಕೆಆರ್ ಬಡಾವಣೆಯ ಪೆಟ್ರೋಲ್ ಬಂಕ್ ಮುಂಬಾಗ ವೆಲ್ಫೇರ್ ಪಾರ್ಟಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

(Visited 12 times, 1 visits today)