ತುಮಕೂರು:

ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದ್ದು, ಉತ್ತಮ ಪರ್ಯಾಯ ರಾಜಕೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೆಹಲಿಯಲ್ಲಿ ಆಗಿರುವ ಬದಲಾವಣೆಯನ್ನು ತುಮಕೂರು ಜಿಲ್ಲೆಯಲ್ಲಿ ಕಾಣಬೇಕು ಎನ್ನುವ ಕಾರಣಕ್ಕೆ ಆಮ್ ಆದ್ಮಿ ಜನರ ಬಳಿಗೆ ತೆರಳುತ್ತಿದೆ, ದೆಹಲಿಯಲ್ಲಿರುವ ಕ್ರೇಜಿವಾಲ್ ನೇತೃತ್ವದ ಸರ್ಕಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ದೇಶಕ್ಕೆ ಅವಶ್ಯಕವಾಗಿದ್ದು, ಉನ್ನತ ವ್ಯಾಸಂಗ, ಉತ್ತಮ ಆರೋಗ್ಯ ಕಲ್ಪಿಸುವುದೇ ಆಮ್‍ಆದ್ಮಿ ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಟಿ.ನಾಗಣ್ಣ ಮಾತನಾಡಿ ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ಬೆಳೆಗೆ ತಕ್ಕಂತೆ ಬೆಲೆ ಸಿಗದೇ ರೈತರು ಪರದಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ಹೇಮಾವತಿ ನೀರಿನ ಲಭ್ಯತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಜಿಲ್ಲೆ ವಿಫಲವಾಗಿದೆ, ಇಂದಿಗೂ ಪಾವಗಡ ಸೇರಿದಂತೆ ಅನೇಕ ತಾಲ್ಲೂಕುಗಳು ನೀರಾವರಿಯಿಂದ ವಂಚಿತವಾಗಿದ್ದು, ನೀರಾವರಿ ಮೇಲೆ ರಾಜಕಾರಣ ಮಾಡುವ ರಾಜಕಾರಣಿಗಳಿಂದಾಗಿ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಉಂಟಾಗಿದೆ ಎಂದರು.
ಪಕ್ಷ ನೀಡಿರುವ ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ಪಕ್ಷ ಸಂಘಟಿಸುವುದಾಗಿ ಹೇಳಿದ ಅವರು, ದೆಹಲಿಯಲ್ಲಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯನ್ನು ಇಂದು ವಿಶ್ವಮನ್ನಣೆಯನ್ನು ಪಡೆದಿದೆ, ಸಾರ್ವಜನಿಕರಿಗೆ ಅಪಘಾತವಾದರೆ ಒಂದು ಕೋಟಿ ವಿಮೆ ನೀಡಿದೆ, ಭ್ರಷ್ಟಾಚಾರ ರಹಿತ ಸರ್ಕಾರಕ್ಕೆ ಆನ್ ಲೈನ್ ಸೇವೆ ನೀಡಲಾಗುತ್ತಿದೆ, ಅಧಿಕಾರಿ ವರ್ಗದ ಮುಂದೆ ನಿಲ್ಲದೇ ತಮ್ಮ ಅಗತ್ಯ ಸೇವೆಯನ್ನು ಪಡೆಯುವ ಮೂಲಕ ಭ್ರಷ್ಟಾಚಾರಕ್ಕೆ ನಿಯಂತ್ರಣ ಹಾಕಿರುವ ವ್ಯವಸ್ಥೆ ದೆಹಲಿಯಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕ್ರೇಜಿವಾಲ್ ಸಲಹೆಗಾರ ರೊಮಿ ಭಾಟಿ, ದರ್ಶನ್ ಜೈನ್, ನಗರ ಘಟಕದ ಅಧ್ಯಕ್ಷ ಮುನೀರ್ ಅಹ್ಮದ್, ಜಿಲ್ಲಾ ಮುಖಂಡ ಉಮರ್ ಫಾರೂಕ್ ಇದ್ದರು.

(Visited 7 times, 1 visits today)