ತುಮಕೂರು:

     ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಮಕ್ಕಳ ಆಸ್ಪತ್ರೆ ತೆರೆಯಬೇಕೆಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕೊರಟಗೆರೆಯಲ್ಲಿ ಉಪನೋಂದಣಿ ಕಛೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 3ನೇ ಅಲೆಯಲ್ಲಿ ಹೆಚ್ಚಾಗಿ ಮಕ್ಕಳಿಗೆ ಸೋಂಕು ತಗಲುವ ಸಂಭವವಿದೆ ಎಂದು ತಜ್ಞವೈದ್ಯರು ಅಭಿಪ್ರಾಯ ಪಟ್ಟಿರುವುದರಿಂದ ಪ್ರಾಯೋಗಿಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಆಸ್ಪತ್ರೆಯನ್ನು ಹಾಗೂ ನಂತರ ಎಲ್ಲಾ ತಾಲ್ಲೂಕುಗಳಲ್ಲಿಯೂ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 65 ಮಂದಿ ಮಕ್ಕಳ ತಜ್ಞವೈದ್ಯರಿದ್ದಾರೆಂದು ಮಾಹಿತಿಯಿದ್ದು, ಮುಂದಿನ 10 ದಿನಗಳೊಳಗಾಗಿ ಮಕ್ಕಳ ವೈದ್ಯರು ಸೇರಿದಂತೆ ಎಲ್ಲಾ ವೈದ್ಯರಿಗೂ ಕೋವಿಡ್ ಸೋಂಕು ಸಂದರ್ಭದಲ್ಲಿ ಮಕ್ಕಳ ಆರೈಕೆ, ಔಷಧೋಪಚಾರ, ಚಿಕಿತ್ಸೆ ನೀಡುವ ಬಗ್ಗೆ ಸೂಕ್ತ ತರಬೇತಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಮಕ್ಕಳ ಆಸ್ಪತ್ರೆ ತೆರೆಯಲು ಔಷಧಿ, ಐಸಿಯು, ಆಮ್ಲಜನಕ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಅಗತ್ಯ ಚಿಕಿತ್ಸಾ ಉಪಕರಣ ಖರೀದಿಗಾಗಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ ಅನುದಾನವನ್ನು ವಿಪತ್ತು ನಿರ್ವಹಣಾ ನಿಧಿಯಡಿ ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕೋವಿಡ್ 3ನೇ ಅಲೆ ವ್ಯಾಪಿಸದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಕೋವಿಡ್ ಸೋಂಕು ತಗಲಿದ 4 ವರ್ಷದೊಳಗಿನ ಮಕ್ಕಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚಿಕಿತ್ಸೆಗೆ ಅನುವಾಗುವಂತೆ ಮಕ್ಕಳೊಂದಿಗೆ ಪೋಷಕರೊಬ್ಬರು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳ ಜೊತೆಗಿರುವ ಪೋಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು ಎಂದರಲ್ಲದೆ, ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ವಿಶ್ವಾಸವಿರುವುದರಿಂದ ಮಕ್ಕಳ ಜೊತೆ ಪೋಷಕರು ಉಳಿದುಕೊಳ್ಳಬಹುದಾಗಿದೆ ಎಂದರು.

      ರಾಜ್ಯದಲ್ಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಕೋವಿಡ್ ಸೋಂಕು ಇಳಿಮುಖವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದ ಬಳಿಕ ಜಿಲ್ಲೆಗಳಲ್ಲಿ ಹಂತಹಂತವಾಗಿ ಲಾಕ್‍ಡೌನ್, ಸೆಮಿಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಕಂದಾಯ ಇಲಾಖೆಯಲ್ಲಿ ಖಾತೆ, ಪಹಣಿ, ಪೋಡಿ, ತಿದ್ದುಪಡಿ ಬದಲಾವಣೆಗೆ ಲಂಚದ ಬೇಡಿಕೆ ಇಡುತ್ತಿರುವ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಲಂಚ ಸ್ವೀಕರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

      ಕಂದಾಯ ಇಲಾಖೆಯನ್ನು ಲಂಚ ಮುಕ್ತ ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಡಿ ಬರುವ ಎಲ್ಲಾ ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪೋಡಿ, ಪಹಣಿ, ಮ್ಯುಟೇಶನ್‍ಗಳನ್ನು ಆನ್‍ಲೈನ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ. ನಾನು ಇಲಾಖೆ ಸಚಿವನಾದ ಮೇಲೆ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಬಡವರ್ಗಕ್ಕೆ ಸೇರಿದವರಿಗೆ ಅರ್ಜಿ ಸಲ್ಲಿಸದೆಯೇ ಆಧಾರ್ ನಂಬರ್ ಆಧಾರದ ಮೇಲೆ ಫಲಾನುಭವಿಗಳ ಮನೆ ಬಾಗಿಲಿಗೆ ವೃದ್ಧಾಪ್ಯವೇತನ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ 40,000 ಫಲಾನುಭವಿಗಳಿಗೆ ವೃದ್ಧಾಪ್ಯವೇತನ ತಲುಪಿಸಲಾಗಿದೆ. ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಡಬಾರದೆಂಬ ದೃಷ್ಟಿಯಿಂದ ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಂದಾಯ, ನೋಂದಣಿ, ಸರ್ವೇ ಇಲಾಖೆಗಳು ಸಮನ್ವಯತೆಯ ಕೊರತೆಯನ್ನು ನೀಗಿಸಲು ಆನ್‍ಲೈನ್ ನೋಂದಣಿ ಪದ್ಧತಿಯನ್ನು ಜಾರಿಗೆ ತರಲಾಗಿದೆಯಲ್ಲಿದೆ, ನೋಂದಣಿ ಪ್ರಕ್ರಿಯೆಯಲ್ಲಿ ವಿಧಿಸಿರುವ ನಿಬಂಧನೆಗಳನ್ನು ಸರಳೀಕರಣಗೊಳಿಸಲಾಗಿದೆ. ಯಾವುದೇ ಸರ್ಕಾರಿ ಜಮೀನಿನ ಅಕ್ರಮ ಬಳಕೆಗೆ ಅವಕಾಶ ನೀಡದಂತೆ 3 ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ 20 ಮಂದಿ ನೋಂದಣಿ ಇಲಾಖೆ ನೌಕರರನ್ನು ಅಮಾನತ್ತು ಮಾಡಲಾಗಿದೆ ಎಂದು ಹೇಳಿದರು.

(Visited 11 times, 1 visits today)