ತುಮಕೂರು :
ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನವೇ ನಾಯಕರುಗಳು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇನ್ನು 20 ವರ್ಷ ಕಳೆದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ಇಲ್ಲ. ರಾಹುಲ್ಗಾಂಧಿಯ ಹೆಸರೇಳಿಕೊಂಡು ಚುನಾವಣೆಗೆ ಹೋದರೆ ಕೇವಲ ನಾಲ್ಕು ವೋಟು ಸಹ ಬೀಳುವುದಿಲ್ಲ ಎಂದು ಟೀಕಿಸಿದರು.
ಕೊರಟಗೆರೆಯಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಲೋಕಾರ್ಪಣೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಕನಸು ಕಾಣಲಾಗುತ್ತಿದೆ. ಇದು ಕಾಂಗ್ರೆಸ್ ನಾಯಕರ ತಿರುಕನ ಕನಸು ಎನ್ನದೇ ಮತ್ತೇನು ಹೇಳಬೇಕು ಎಂದು ಪ್ರಶ್ನಿಸಿದರು.
ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ 6 ಜನ ಟವಲ್ ಹಾಕಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಮಲ್ಲಿಕಾರ್ಜಿನ ಖರ್ಗೆ, ಎಸ್.ಆರ್. ಪಾಟೀಲ್ ಸೇರಿದಂತೆ 6 ಮಂದಿ ನಾಯಕರು ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಈ ತಿರುಕನ ಕನಸು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸದೃಢ ನಾಯಕರಿಲ್ಲ. ಹಾಗಾಗಿ ಇನ್ನು 20 ವರ್ಷ ರಾಜ್ಯ ಮತ್ತು ಕೇಂದ್ರದಲ್ಲಿ ಯಾರೇ ಬಂದರೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ. ಈಗಾಗಲೇ ಯಾರ್ಯಾರು ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿದ್ದಾರೆ, ಅವರಿಗೆಲ್ಲಾ ರಾಜ್ಯಾಧ್ಯಕ್ಷ ನೋಟಿಸ್ ನೀಡಿದ್ದಾರೆ ಎಂದರು.
ಈಗಾಗಲೇ ನಾಯಕತ್ವ ಬದಲಾವಣೆ ವಿಚಾರ ಮುಗಿದು ಹೋದ ಅಧ್ಯಾಯ. ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ನಾಯಕರು. ಮುಂದಿನ 2 ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಚುನವಾಣೆಯೂ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದರು.
ಬೆಂಗಳೂರಿನಲ್ಲಿ ಮತ್ತೆ ರೌಡಿಸಂ ಬೆಳೆಯಲು ಅವಕಾಶ ನೀಡುವುದಿಲ್ಲ. ಪುಡಿ ರೌಡಿಗಳ ಅಟ್ಟಹಾಸಕ್ಕೆ ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಬೆಂಗಳೂರಿನ ಜನರ ಶಾಂತಿ ಹಾಳು ಮಾಡಲು ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ಈಗಾಗಲೇ ಗೃಹ ಸಚಿವರ ಜತೆ ಚರ್ಚಿಸಿದ್ದು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಮಾಜಿ ಕಾರ್ಪೋರೇಟರ್ ರೇಖಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಬ್ಬರು-ಮೂವರನ್ನು ಈಗಾಗಲೇ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದಾರೆ ಎಂದು ಹೇಳಿದರು. ರೇಖಾ ಅವರ ಕೊಲೆ ಹಿಂದೆ ಯಾರ ಕೈವಾಡವಿದೆ, ಯಾರು ಮಾಡಿದ್ದಾರೆ ಎಂಬ ಬಗ್ಗೆ ಈಗಾಗಲೇ ಪೆÇಲೀಸರಿಗೆ ಮಾಹಿತಿ ಇದೆ. ಆರೋಪಿಗಳು ಯಾರೇ ಆಗಿದ್ದರೂ ಕಾನೂನು ಕ್ರಮ ಖಚಿತ ಎಂದರು.