ತುಮಕೂರು :
ನಗರದಲ್ಲಿ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡದೆ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ಕ್ರೀಡಾಂಗಣ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಎಂಪ್ರೆಸ್ ಕಾಲೇಜು ಸೇರಿದಂತೆ ಗ್ರಂಥಾಲಯ ಕಾಮಗಾರಿಗಳ ವೀಕ್ಷಣೆ ಮಾಡಿದ ಸಚಿವರು, ಗುಣಮಟ್ಟ ಕಾಯ್ದುಕೊಂಡು ಕಾಮಗಾರಿಗಳನ್ನು ಮುಗಿಸುವಂತೆ ನಿರ್ದೇಶಿಸಿದರು.
ವೀಕ್ಷಣೆ ವೇಳೆ ಸ್ಥಳದಲ್ಲೇ ಅಧಿಕಾರಿಗಳಿಂದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ವಿಳಂಬಕ್ಕೆ ಆಸ್ಪದ ಕೊಡದೆ ಸಮನ್ವಯ ಸಾಧಿಸಿಕೊಂಡು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಇದೇ ವೇಳೆ ಎಂಪ್ರೆಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಲಸಿಕಾಕರಣ ಕಾರ್ಯವನ್ನೂ ವೀಕ್ಷಿಸಿ, ಲಸಿಕಾಕರಣ ಯಶಸ್ವಿಯಾಗಿ ನಡೆಸುವಂತೆಯೂ ನಿರ್ದೇಶಿಸಿದರು.
ಕೋವಿಡ್‍ನಿಂದ ಕಾಮಗಾರಿಗಳಲ್ಲಿ ವಿಳಂಬ:
ಕಾಮಗಾರಿಗಳ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಾಮಗಾರಿಯಲ್ಲಿ ವಿಳಂಬವಾಗಿ ಪೂರ್ಣವಾಗಿ ಮುಗಿಸಲಿಕ್ಕೆ ಸಾಧ್ಯವಾಗಿಲ್ಲ. ಕೋವಿಡ್ ಭಯದ ವಾತಾವರಣದಿಂದಾಗಿ ಕಾರ್ಮಿಕರ ಕೊರತೆ ಉಂಟಾಗಿದೆ. ಪ್ರಸ್ತುತ ಕೋವಿಡ್ ಪ್ರಮಾಣ ಕಡಿಮೆಯಾಗಿದ್ದು, ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಗಳಿಗೆ ವೇಗ ನೀಡುವಂತೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿಯೇ ತುಮಕೂರು ಅತ್ಯುತ್ತಮ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಅಂತಿಮ ಹಂತದಲ್ಲಿರುವ ಎಂಪ್ರೆಸ್ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಬಹುತೇಕ ಸ್ಮಾರ್ಟ್‍ಸಿಟಿ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತಕ್ಕೆ ತಲುಪುತ್ತಿವೆ. ಅವಶ್ಯಕವಿದ್ದಲ್ಲಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತುಮಕೂರು ತುಮಕೂರು ಸ್ಮಾರ್ಟ್‍ಸಿಟಿಯು ಅಭಿವೃದ್ಧಿ ಕಾಮಗಾರಿಗಳಲ್ಲಿ ದೇಶದಲ್ಲಿ ಒಂಬತ್ತನೇ ಮತ್ತು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, 2023ರೊಳಗೆ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ನಗರದಲ್ಲಿರುವ 520 ಉದ್ಯಾನವನಗಳ ಪೈಕಿ 24 ಒತ್ತುವರಿಯಾಗಿದ್ದು, 12 ಉದ್ಯಾನವನಗಳ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ ಉದ್ಯಾನವನಗಳ ಒತ್ತುವರಿ ತೆರವು ಕಾರ್ಯ ಮುಂದುವರೆದಿದೆ. ಉದ್ಯಾನವನ, ರಾಜಗಾಲುವೆ ಸೇರಿದಂತೆ ಅಮಾನಿಕೆರೆ ಹಿಂಭಾಗದಲ್ಲಿನ ಜಾಗ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಕಲುಷಿತ ನೀರು ಅಮಾನಿಕೆರೆಗೆ ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸ್ವಚ್ಛತೆಗೆ ಒತ್ತು ಕೊಡಿ: ನಗರದಲ್ಲಿ ಸ್ವಚ್ಛತೆಗೆ ಒತ್ತು ಕೊಟ್ಟು, ಹೆಚ್ಚು ಗಿಡಗಳನ್ನು ಬೆಳೆಸಿ ಹಸಿರು ನಗರವನ್ನಾಗಿ ಪರಿವರ್ತನೆ ಮಾಡಲು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ನಗರದ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ, ನಗರಾಭಿವೃದ್ಧಿ ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಸ್ವಚ್ಛತೆಗೆ ಆದ್ಯತೆ ಕೊಡುವುದರ ಜೊತೆಗೆ ಕೋವಿಡ್ ಮೂರನೇ ಅಲೆ ತಡೆಗೆ ಕ್ರಮ ಕೈಗೊಳ್ಳಬೇಕು. ಬಡವರು ಮತ್ತು ನಿರ್ಗತಿಕರಿಗೆ ಆಸರೆಯಾಗಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಕಾಮಗಾರಿಗಳಲ್ಲಿ ಯಾವುದೇ ಲೋಪ ಮತ್ತು ಸರ್ಕಾರದ ಹಣ ವ್ಯಯವಾಗದಂತೆ ಜವಾಬ್ದಾರಿಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಉದ್ಯಾನವನ, ರಾಜಗಾಲುವೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ನಿರ್ದೇಶಿದರು. ಕಾಮಗಾರಿ ಗುತ್ತಿಗೆ ವಹಿಸಿರುವ ಎಲ್ ಅಂಡ್ ಟಿ ಕಂಪನಿಯು ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ಸರಿಯಾಗಿ ಕಾಮಗಾರಿಗಳ ಕಾರ್ಯ ಮುಗಿಸದಿದ್ದಲ್ಲಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸಮರ್ಪಕವಾಗಿ ಕಾಮಗಾರಿ ಮುಗಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಬಳಿಕ ಸ್ಮಾರ್ಟ್ ಸಿಟಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಮೇಯರ್ ಕೃಷ್ಣಪ್ಪ, ಉಪಮೇಯರ್ ನಾಝಿಮಾ ಬಿ., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಣ್ಣ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.