ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿಗೆ ಸರ್ಕಾರದಿಂದ ಐವರು ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ಸಿದ್ಧತೆ ನಡೆದಿದೆ. ಈ ಐವರೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರಾಗಿದ್ದಾರೆ. ಇವರಲ್ಲಿ ಮೂವರು ಮಾಜಿ ಸದಸ್ಯರಾಗಿದ್ದು ಇಬ್ಬರು ಹೊಸ ಸದಸ್ಯರಾಗಿದ್ದಾರೆ.
16 ಚುನಾಯಿತ ಸದಸ್ಯರ ಸಂಖ್ಯಾ ಬಲವುಳ್ಳ ಪಂಚಾಯ್ತಿಗೆ ಸರ್ಕಾರ ಐವರನ್ನು ನಾಮ ನಿರ್ದೇಶನ ಮಾಡಲು ಮುಂದಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಶಿಫಾರಸ್ಸಿನಂತೆ ಪಪಂ ಮಾಜಿ ಸದಸ್ಯರುಗಳಾದ ಬಡ್ಡಿಪುಟ್ಟರಾಜು, ಗೀತಾಬಾಬು, ಗ್ರಾಪಂ ಮಾಜಿ ಸದಸ್ಯ ಕಾರ್ಪೆಂಟರ್ ದುರ್ಗಯ್ಯ ಹಾಗೂ ಬಳೆದಾಸಪ್ಪ, ಅಲ್ಲಾಭಕಶ್ ನಾಮ ನಿರ್ದೇಶನಗೊಳ್ಳಲಿದ್ದಾರೆ.
ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ನಾಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಐವರ ಮಾಹಿತಿ ಸಂಗ್ರಹಿಸಲು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಸರ್ಕಾರದ ಕಾರ್ಯದರ್ಶಿ ಎ.ವಿಜಯ್‍ಕುಮಾರ್ ಅವರು ಹುಳಿಯಾರು ಪಟ್ಟಣ ಪಂಚಾಯ್ತಿಗೆ ಪತ್ರ ಬರೆದು ಐವರ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಕೊಡಲು ಸೂಚನೆ ನೀಡಿದ್ದಾರೆ.
ಈ ಐವರಲ್ಲಿ ಬಳೆದಾಸಪ್ಪ ಅವರು ಪ್ರೌಢಾವಸ್ತೆಯಿಂದಲೂ ಸಂಘ ಪರಿವಾರದವರಾಗಿದ್ದು ಎಲ್ಲಾ ಚುನಾವಣೆ ಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಗಲಿರುಳೆನ್ನದೆ, ನಿದ್ರಾಹಾರದ ಅರಿವಿಲ್ಲದೆ ದುಡಿದು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದಾರೆ. ಇನ್ನುಳಿದಂತೆ ಅಲ್ಲಾಭಕಶ್ ಹಾಗೂ ಬಡ್ಡಿಪುಟ್ಟರಾಜು ಅವರು ಮಾಧುಸ್ವಾಮಿ ಅವರು ಪಕ್ಕಾ ಬೆಂಬಲಿಗರಾಗಿದ್ದು ಜೆಡಿಯುನಿಂದ ಕೆಜೆಪಿ, ಈಗ ಬಿಜೆಪಿಯಲ್ಲೂ ಸಚಿವರ ಬೆಂಬಲಿಗರಾಗಿದ್ದಾರೆ.
ಕಾರ್ಪೆಂಟರ್ ದುರ್ಗಯ್ಯ ಅವರು ಕಳೆದ ವಿಧಾನಸಭಾ ಚುನಾವಣೆಗೆ ಹಾಗೂ ಗೀತಾಬಾಬು ಅವರು ಇತ್ತಿಚಿನ ಪಪಂ ಚುನಾವಣೆಗೆ ಮಾಧುಸ್ವಾಮಿ ಬಣ ಸೇರಿದವರಾಗಿದ್ದಾರೆ. ಆದರೂ ಇವರಿಬ್ಬರು ನಾಮನಿರ್ದೇಶನಕ್ಕೆ ಆಯ್ಕೆ ಆಗಿರುವುದು ಪಕ್ಷದವರ ಅಚ್ಚರಿಯ ಜತೆ ಅಸಮಧಾನಕ್ಕೂ ಕಾರಣವಾಗಿದೆ.
ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಜಾತಿ ಸಂದೇಶ ನೀಡುವ ಸಲುವಾಗಿ ದುರ್ಗಯ್ಯ ಅವರಿಗೆ ಜೆಡಿಯುನಲ್ಲಿದ್ದಾಗ ಮಾಧುಸ್ವಾಮಿ ಅವರ ಪರ ದುಡಿದ ಫಲವಾಗಿ ಗೀತಾಬಾಬು ಅವರಿಗೆ ನಾಮಿನಿ ನೀಡಲಾಗಿದೆ ಎನ್ನಲಾಗಿದೆ.