ತುಮಕೂರು:
ಕಟ್ಟಡ ಕಾರ್ಮಿಕರಿಗೆ ಲಾಕ್‍ಡೌನ್ ಪರಿಹಾರವಾಗಿ 10 ಸಾವಿರ ಹಾಗೂ ಕಟ್ಟಡ ಕಾರ್ಮಿಕರಿಗೆ ವಿತರಿಸಿರುವ ಕಳಪೆ ಪಡಿತರ ಕಿಟ್ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘಟನೆಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕ ಮುಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅವರು, ಕೊರೋನಾ ಎರಡನೇ ಅಲೆಯಿಂದಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿತು, ಈ ಲಾಕ್‍ಡೌನ್‍ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಟ್ಟಡ ಕಾರ್ಮಿಕರಿಗೆ ಕೆಲಸ ದೊರೆಯದೇ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಕಟ್ಟಡ ಕಾರ್ಮಿಕರಿಗೆ 10 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೂ ಶಾಸಕರಿಗೂ ಏನು ಸಂಬಂಧ, ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ದೊರೆಯಬೇಕಾದರೆ, ಶಾಸಕರ ಮಧ್ಯ ಪ್ರವೇಶವನ್ನು ನಿಲ್ಲಿಸಬೇಕು, ಸಂಘಟನೆಯ ಮೂಲಕವೇ ಸೌಲಭ್ಯವನ್ನು ನೀಡಲು ಕ್ರಮವಹಿಸಬೇಕು, ಮೊದಲನೇ ಅಲೆಯ ಅವಧಿಯಲ್ಲಿ ಘೋಷಿಸಿರುವ ಪರಿಹಾರವನ್ನು ಶೀಘ್ರ ನೀಡಬೇಕು, ಎರಡನೇ ಅಲೆ ಪರಿಹಾರವನ್ನು ನೀಡಲು ಕಾರ್ಯಪ್ರವೃತ್ತರಾಗಬೇಕೆಂದು ಆಗ್ರಹಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಕಟ್ಟಡ ನಿರ್ಮಾಣ ಸಾಮಗ್ರಿ ಸೇರಿದಂತೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದ್ದು, ಯಾವ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿಯೂ ಆಗದಂತಹ ಬೆಲೆ ಏರಿಕೆಯೂ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಗುತ್ತಿದ್ದು, ಸರ್ಕಾರಗಳು ಸರ್ವಾಧಿಕಾರಿ ಧೋರಣೆಯನ್ನು ಕೈಬಿಟ್ಟು ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಬಿ.ಉಮೇಶ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸದೇ ಸರ್ಕಾರ ಹಾಗೂ ಆಡಳಿತ ಪಕ್ಷದ ಶಾಸಕರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಕಾರ್ಮಿಕರಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೀಡಿರುವ ಪಡಿತರ ಕಿಟ್‍ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದ್ದು, ಕಡಿಮೆ ದರದ ವಸ್ತುಗಳನ್ನು ನೀಡಿ ಹೆಚ್ಚಿನ ಬೆಲೆಯ ಕಿಟ್ ನೀಡಿದ್ದು, ಈ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಎಸ್.ಪಿ.ನಾಗರಾಜು ಮಾತನಾಡಿ ಸರ್ಕಾರಗಳ ಸರ್ವಾಧಿಕಾರಿ ಧೋರಣೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ನಿರಂತರ ಬೆಲೆ ಏರಿಕೆಯಿಂದಾಗಿ ಜನಜೀವನ ತತ್ತರಗೊಂಡಿದ್ದು, ಕಾರ್ಮಿಕ ಕಲ್ಯಾಣಕ್ಕೆ ಇರುವ ಅನುದಾನವನ್ನು ಬಳಸಲು ಶಾಸಕ ಅಣತಿಯನ್ನು ಕೇಳುತ್ತಿರುವುದು ದುರದೃಷ್ಟಕರ ಎಂದ ಅವರು, ಕಾರ್ಮಿಕರು ಐಕ್ಯತೆಯಿಂದ ಹೋರಾಟ ಮಾಡಿದರೆ ಮಾತ್ರ ಕಾರ್ಮಿಕರ ಕಲ್ಯಾಣ ಸಾಧ್ಯ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರು ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಗೋಪಾಲ್, ಕುಪ್ಪೂರು ವೆಂಕಟೇಶ್, ಅರೇಗುಜ್ಜನಹಳ್ಳಿ ರುದ್ರೇಶ್, ಎಸ್.ಎನ್.ಪಾಳ್ಯ ರಂಗನಾಥ್, ಕಾರ್ಪೆಂಟರ್ ನಾಗರಾಜು, ಎಲೆಕ್ಟ್ರೀಕಲ್ ರವಿಕುಮಾರ್, ಚಂದ್ರಪ್ಪ, ಕೊರಟಗೆರೆ ಕಾರ್ಯದರ್ಶಿ ಗೋವಿಂದರಾಜು, ಶಿರಾ ರಂಗನಾಥಪ್ಪ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್, ಸಿಐಟಿಯು ಗೌರವಾಧ್ಯಕ್ಷ ಗೋವಿಂದರಾಜು, ಇಬ್ರಾಹಿಂ ಕಲೀಲ್, ಶಂಕರಪ್ಪ,ವೆಂಕಟೇಶ್, ನಾಸಿರುದ್ದೀನ್, ಮಹೇಶ್, ಕೈದಾಳ ರಮೇಶ್, ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಒಕ್ಕೂಟದ ಐಎನ್ಟಿಯುಸಿ ಉಮೇಶ್.ಬಿ, ನೃಪಾಲ್, ಶ್ರೀನಿವಾಸ್, ಶಾಂತಲಕ್ಷ್ಮೀ ಮಧುಗಿರಿ, ಮೋಹನ್ ಕುಮಾರ್, ನರಸಿಂಹರಾಜು ಇತರರಿದ್ದರು.