ಮಧುಗಿರಿ :
ತಾಲೂಕಿನ ಸಸ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿಕೊಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ತಾಲೂಕಿನಲ್ಲಿ ಅಪಾರ ಗುಡ್ಡಗಾಡಿನ ಸಂಪತ್ತಿದ್ದು, ಅವುಗಳ ಒಡಲಲ್ಲಿ ಸಸ್ಯವನ್ನು ಬೆಳೆಸಿದರೆ ಸಮೃದ್ಧಿ ಅಂತರ್ಜಲ ಹಾಗೂ ಸುಸ್ಥಿರ ವಾರಾವರಣವನ್ನು ಸೃಷ್ಟಿಸಬಹುದು. ಈ ಗುಡ್ಡಗಾಡು ಪ್ರದೇಶದಲ್ಲಿ ನೀರನ್ನು ಹಿಡಿದಿಡುವ ಹಾಗೂ ಸೌಂದರ್ಯ ಹೆಚ್ಚಿಸುವ ಬಿದಿರನ್ನು ಹೆಚ್ಚಾಗಿ ಬೆಳಸಬೇಕು. ಅದಕ್ಕಾಗಿ ವಿಶೇಷ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದರೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುತ್ತೇನೆ. ಇಂದು ಭೂಮಿಯ ಬೌಗೋಳಿಕ ಕ್ಷೇತ್ರ ಕಡಿಮೆಯಾಗುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಬವಣೆ ಹಿಂದಿನ ಮಾತಾಗಿದ್ದು, ಪ್ರಸ್ತುತ ಉತ್ತಮ ಗಾಳಿಗಾಗಿ ಬವಣೆ ಎಂಬಂತಾಗಿದೆ. ಮರಗಳ ವೃದ್ಧಿಯಾಗದೆ ಉತ್ತಮ ಗಾಳಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮರಗಳನ್ನು ಬೆಳೆಸಿ ಉಳಿಸುವುದು ಕೇವಲ ಸರ್ಕಾರ ಹಾಗೂ ಇಲಾಖೆಗಳ ಕರ್ತವ್ಯವಲ್ಲ. ಅದನ್ನು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಕೆಲಸವಾಗಬೇಕು. ಇಲಾಖೆಯಿಂದ ಅನುಷ್ಠಾನವಾಗುವ ಕಾಮಗಾರಿಗಳಲ್ಲಿ ಕೆಲವು ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಗುಣಮಟ್ಟ ಹಾಗೂ ಪ್ರಾಮಾಣಿಕತೆ ಕಾಪಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ನಡೆಯಬೇಕು. ಪ್ರಸ್ತುತ ಕರೊನಾ 2ನೇ ಅಲೆ ಕಡಿಮೆಯಾಗಿಲ್ಲ. ಬದಲಿಗೆ ಜೀವಂತವಾಗಿದ್ದು, 3ನೇ ಅಲೆಗೆ ಸಹಕಾರ ನೀಡುವಂತಿದೆ. ಆದ್ದರಿಂದ ಜನತೆ ಪ್ರಜ್ಞಾವಂತಿಕೆಯನ್ನು ಪ್ರದರ್ಶಿಸಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಲಸಿಕೆ ಪಡೆದು ಕರೊನಾ ನಿಯಂತ್ರಣಕ್ಕೆ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಸ್ಯೋಧ್ಯಾನದಲ್ಲಿ 4 ಲಕ್ಷ ವೆಚ್ಚದ ದೈಹಿಕ ವ್ಯಾಯಾಮದ ಪರಿಕರಗಳನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿದರು.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ ವಿಶ್ವ ಸಂಸ್ಥೆಯ ನಿರ್ದೇಶನದಂತೆ 1972 ರಲ್ಲಿ ಸ್ವೀಡನ್ ದೇಶದಲ್ಲಿ ಈ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಗಿದ್ದು, ಪ್ರತಿ ಜೂನ್.5 ರಂದು ಆಚರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಅರಣ್ಯ ಅಭಿವೃದ್ಧಿ ಮಂತ್ರದೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅರಣ್ಯ ರಕ್ಷಣೆ ಹಾಗೂ ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದು ಹಲವಾರು ಅಭಿವೃದ್ಧಿಗಾಗಿ ಅರಣ್ಯ ನಾಶವಾಗುತ್ತಿರುವುದು ದುರಂತ. ಇದು ಜಗತ್ತಿನ ತಾಪಮಾನದ ಏರಿಳಿತಕ್ಕೆ ಕಾರಣವಾಗುತ್ತಿದ್ದು, ಮನುಕುಲವು ಅಪಾಯದ ಅಂಚಿನಲ್ಲಿದೆ. ದೇಶದ ಅಭಿವೃದ್ಧಿಯು ಅರಣ್ಯ ನಾಶಕ್ಕೆ ಕಾರಣವಾಗಬಾರದು. ಸುಸ್ಥಿರ ಅಭಿವೃದ್ಧಿಯನ್ನು ಅರಣ್ಯದ ಜೊತೆಯಾಗಿಯೇ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ವಾಸುದೇವನ್, ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್, ಪುರಸಭೆ ಸದಸ್ಯರಾದ ಎಂ.ಆರ್. ಜಗನ್ನಾಥ್, ಎಂ.ಎಲ್. ಗಂಗರಾಜು, ನಾರಾಯಣ್, ನರಸಿಂಹಮೂರ್ತಿ, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು, ಎಪಿಎಂಸಿ ಸದಸ್ಯ ಬಸವರಾಜು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.