ತುಮಕೂರು :

   ಜಿಲ್ಲೆಯಲ್ಲಿನ ಎಲ್ಲಾ ಗ್ರಂಥಾಲಯಗಳನ್ನು ಆಧುನಿಕ ಮತ್ತು ಸುಸಜ್ಜಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ಕೇಂದ್ರ ಗ್ರಂಥಾಲಯದ 2021-22ನೇ ಸಾಲಿನ ಆಯ-ವ್ಯಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹಂತ ಹಂತವಾಗಿ ಗ್ರಂಥಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಒಟ್ಟು 10 ಗ್ರಂಥಾಲಯಗಳ ಪೈಕಿ ಐದು ಗ್ರಂಥಾಲಯಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದ ಗ್ರಂಥಾಲಯಗಳು ಪಟ್ಟಣ ಪಂಚಾಯತಿ ಹಾಗೂ ಪುರಸಭೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳೀಯ ಯೋಜನಾ ಪ್ರಾಧಿಕಾರದಡಿ ಸಿ.ಎ. ಸೈಟ್ ಖರೀದಿಸಲು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಸುಮಾರು 327 ಗ್ರಂಥಾಲಯಗಳು ಗ್ರಾಮ ಪಂಚಾಯಿತಿಗಳ ನಿರ್ವಹಣೆಯಲ್ಲಿದ್ದು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಗ್ರಂಥಾಲಯದ ಮೇಲ್ವಿಚಾರಕರಿಗೆ ನಿರ್ದೇಶಿಸಿದರು.
ಗ್ರಂಥಾಲಯದಲ್ಲಿರುವ ಹೆಚ್ಚುವರಿ ಪುಸ್ತಕಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಶಾಲಾ ಕಾಲೇಜುಗಳಿಗೆ ನೀಡಬೇಕು. ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತೆ ತರಬೇತಿಗಳನ್ನು ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕಿ ಸರೋಜಮ್ಮ ಎಂ. ಮಾತನಾಡಿ, ಪ್ರಸಕ್ತ
ಸಾಲಿನಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಹಾಗೂ ಇತರೆ ಮೂಲಗಳಿಂದ ಅಂದಾಜು 4,98,58,000 ರೂ.
ಆದಾಯ ನಿರೀಕ್ಷಿಸಲಾಗಿದ್ದು, ಈ ಪೈಕಿ ಗ್ರಂಥಾಲಯಗಳ ಅಭಿವೃದ್ಧಿಗಾಗಿ 1,85,67,000 ರೂ.ಗಳನ್ನು ವೆಚ್ಚ ಮಾಡಲು ಅಂದಾಜಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.
ಸಭೆಯಲ್ಲಿ ಗ್ರಂಥಪಾಲಕ ನಾಗರಾಜು ಪಿ.ಎಲ್. ಸಿಬ್ಬಂದಿ ವಿಜಯ್ ಕುಮಾರ್ ಸೇರಿದಂತೆ ಗ್ರಂಥಾಲಯ ಪ್ರಾಧಿಕಾರದ ಕಮಿಟಿ ಸದಸ್ಯರುಗಳು ಉಪಸ್ಥಿತರಿದ್ದರು.

(Visited 9 times, 1 visits today)