ತುಮಕೂರು:

      ಕಾಂಗ್ರೆಸ್‍ನಲ್ಲಿ ಭವಿಷ್ಯದ ಸಿಎಂ ಅಭ್ಯರ್ಥಿ ಬಗ್ಗೆ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿ, ಕೈ ಹೈಕಮಾಂಡ್ ಒಪ್ಪಿದರೆ ಡಿ.ಕೆ.ಶಿವಕುಮಾರ್ ಕೂಡಾ ಮುಖ್ಯಮಂತ್ರಿ ಆಗಬಹುದು ಎಂದಿದ್ದಾರೆ. ಜೊತೆಗೆ ಜಿ.ಪರಮೇಶ್ವರ್ ಡಿಸಿಎಂ ಆಗಿದ್ದಾಗಲೇ ಝೀರೋ ಟ್ರಾಫಿಕ್ ಮಾಡಿಕೊಂಡು ಓಡಾಡುತಿದ್ದರು. ಮುಖ್ಯಮಂತ್ರಿಯಾದರೆ ಇಡೀ ತುಮಕೂರು ಜಿಲ್ಲೆಯನ್ನೇ ಝೀರೋ ಮಾಡುತ್ತಾರೆ ಎಂದು ಸಂಸದ ಬಸವರಾಜು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಮಾತಿನ ಸಮರಕ್ಕೆ ಪ್ರತಿಕ್ರಿಯಿಸಿದ ಬಸವರಾಜು, ಸುಮಲತಾ ಒಬ್ಬ ಡಿಗ್ನಿಪೈಡ್ ಮಹಿಳಾ ಸಂಸದೆ. ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಕುಮಾರಸ್ವಾಮಿ ಹೆಣ್ಣು ಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣರನ್ನ ಕೇವಲ ಸುಮಲತಾ ಮಾತ್ರ ಹೊಗಳಲಿಲ್ಲ. ನಾನು ಹೊಗಳಿದ್ದೇನೆ. ಆತ ಸಂಸತ್ತಿನಲ್ಲಿ ಮಾತಾಡಿದ್ದು ನೋಡಿ ನಾನು ಬೆನ್ನು ತಟ್ಟಿ ಬಂದಿದ್ದೇನೆ. ಇದನ್ನೇ ಮುಂದುವರಿಸಿ ಎಂದಿದ್ದೇನೆ. ಪ್ರಜ್ವಲ್‍ಗೆ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದು ಸಂಸದ ಬಸವರಾಜು ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಸಿಎಂ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಜನರನ್ನು ಆಕರ್ಷಿಸಲು ಈ ರೀತಿ ಮಾತನಾಡಬಹುದು. ಸೋನಿಯಾ ಎದುರು ಅವರೂ ಕೈಮುಗಿದು ನಿಲ್ಲುತ್ತಾರೆ. ಅದೇ ರೀತಿ ಸಿಎಂ ಸಹ ಹೈಕಮಾಂಡ್ಗೆ ಬೈಯ್ಯಲಾಗಲ್ಲ. ಸಿಎಂ ಬಿಎಸ್‍ವೈಗೆ ಸ್ವಂತ ಕ್ವಾಲಿಟಿ ಇದೆ, ಹಿಡಿತ ಇದೆ. ಅವರು ಪ್ರಬಲ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಎಸ್‍ವೈ ಬಿಟ್ಟರೆ ಬಿಜೆಪಿಯಲ್ಲಿ ಪರ್ಯಾಯ ನಾಯಕರಿಲ್ಲ ಎಂದು ಹೇಳಿದರು.

(Visited 46 times, 1 visits today)