ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನಾದ್ಯಂತ ಈಗ ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೆ, ಪಟ್ಟಣದ 4ನೇ ವಾರ್ಡ್‍ನ ದಬ್ಬೆಗಟ್ಟ ಗ್ರಾಮದ ಮುಖ್ಯರಸ್ತೆಯೇ ಕೊಳಚೆಯಿಂದ ತುಂಬಿ ರೋಗವಾಹಕಗಳ ಆಶ್ರಯ ತಾಣವಾಗಿದ್ದು ಜನರು ಭಯದಿಂದ ಜೀವ ನಡೆಸುವಂತಾಗಿದೆ.
ಪಟ್ಟಣದ ಪುರಸಭೆಗೆ ಸೇರಿದ ದಬ್ಬೆಘಟ್ಟ ಗ್ರಾಮದ ಶ್ರೀ ಮರುಳಪ್ಪ ದೇವಾಲಯದ ರಸ್ತೆಯಿಂದ ಶ್ರೀಕೆಂಪಮ್ಮ ದೇವಾಲಯದ ಮುಖ್ಯರಸ್ತೆ ಕೊಳಚೆ ನೀರಿನಿಂದ ಆವೃತಗೊಂಡಿದೆ. ಇದು ಗ್ರಾಮದ ಮುಖ್ಯ ರಸ್ತೆಯಾಗಿ ಬಳಕೆಯಾಗುತ್ತಿದ್ದು ಜನ ಜಾನುವಾರುಗಳ ಜೊತೆಗೆ ಧಾರ್ಮಿಕ ಉತ್ಸವಗಳು ಇದೇ ದಾರಿಯಲ್ಲಿ ಸಾಗಬೇಕಿದೆ. ಸದಾ ಕೊಳಚೆಯಿಂದ ಕೂಡಿರುವ ಈ ರಸ್ತೆಯ ಸನಿಹದಲ್ಲಿಯೇ ವಾಸದ ಮನೆಗಳಿದ್ದು, ಸೊಳ್ಳೆ ಹಾಗೂ ಕೊಳಚೆ ವಾಸನೆಯ ನಡುವೆಯೇ ವಾಸಿಸುತ್ತಿದ್ದಾರೆ. ಸದರಿ ರಸ್ತೆಯನ್ನು ಸರಿಪಡಿಸುವಂತೆ ಪುರಸಭೆಗೆ ಹಾಗೂ ವಾರ್ಡ್‍ನ ಸದಸ್ಯರಿಗೆ ಮನವಿ ಮಾಡಿದರೂ ಈ ಬಗ್ಗೆ ಈವರೆಗೂ ಗಮನ ಹರಿಸಿಲ್ಲ.
ಮಳೆಗಾಲ ಆರಂಭಗೊಂಡಿದ್ದು, ಇನ್ನೂ ಹೆಚ್ಚಿನ ಕೊಳಚೆಯು ನಿರ್ಮಾಣವಾಗುವುದರಿಂದ ಗ್ರಾಮಸ್ಥರಿಗೆ ರೋಗ ಭೀತಿಯುಂಟಾಗಿದ್ದು, ಈಗಲಾದರೂ ಸಂಬಂಧಪಟ್ಟವರು ಶೀಘ್ರವಾಗಿ ರಸ್ತೆ ಸರಿಪಡಿಸಿ, ಸಾರ್ವಜನಿಕರನ್ನು ಭಯದಿಂದ ಮುಕ್ತಗೊಳಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.