ತುಮಕೂರು:
ಜನರಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನ”ವನ್ನಾಗಿ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷ “ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ತಿಳಿದುಕೊಳ್ಳಿ” ( “Know your HIV status”) ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು.
ಹೆಚ್.ಐ.ವಿ. ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಹೆಚ್.ಐ.ವಿ ಸೋಂಕನ್ನು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣ ಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈ ಸೋಂಕಿನ ತಡೆಗಿರುವ ಏಕೈಕ ಮಾರ್ಗ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿದೆ.
ಬನ್ನಿ, ಏಡ್ಸ್ ರೋಗದ ಲಕ್ಷಣಗಳು, ಹರಡುವಿಕೆ, ನಿಯಂತ್ರಣ, ಚಿಕಿತ್ಸಾ ವಿಧಾನ ಹಾಗೂ ಜಿಲ್ಲೆಯಲ್ಲಿರುವ ಏಡ್ಸ್ ಸೋಂಕಿತರ ಅಂಕಿ-ಅಂಶಗಳ ಮಾಹಿತಿ ತಿಳಿಯೋಣ.
ಹೆಚ್.ಐ.ವಿ ವೈರಸ್ ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹಲವಾರು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗ ಲಕ್ಷಣಗಳ ಕೂಟವನ್ನು ಏಡ್ಸ್ ಎಂದು ಕರೆಯಲಾಗುತ್ತದೆ.
ಏಡ್ಸ್ ರೋಗದ ಮುಖ್ಯ ಲಕ್ಷಣಗಳು:
ಈ ರೋಗಕ್ಕೆ ನಿರ್ದಿಷ್ಠವಾದ ಚಿಹ್ನೆಗಳಿಲ್ಲ. ಆದರೆ ಬಹುಮಟ್ಟಿಗೆ ಯಾವುದೇ ಕಾರಣವಿಲ್ಲದೆ ಒಂದು ತಿಂಗಳ ಅವಧಿಯಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಶರೀರದ ತೂಕ ಕಡಿಮೆಯಾಗುತ್ತದೆ. ಯಾವುದೇ ಚಿಕಿತ್ಸೆಗೆ ಗುಣವಾಗದೇ ಒಂದು ತಿಂಗಳಿಗಿಂತಲೂ ಕಂಡು ಬರುವ ಜ್ವರ ಹಾಗೂ ಬೇಧಿ ಏಡ್ಸ್ ರೋಗದ ಮುಖ್ಯ ಲಕ್ಷಣಗಳಾಗಿವೆ.
ಹೆಚ್.ಐ.ವಿ. ಸೋಂಕು ಹರಡುವ ಬಗೆ :
ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿರುವ ವ್ಯಕ್ತಿಯ ರಕ್ತ ಪಡೆಯುವುದು, ಸೋಂಕಿರುವ ವ್ಯಕ್ತಿಯು ಉಪಯೋಗಿಸಿದ ಸಿರಿಂಜ್/ ಸೂಜಿ ಮತ್ತು ಉಪಕರಣಗಳನ್ನು ಸಂಸ್ಕರಿಸದೆ ಬಳಸುವುದು, ಸೋಂಕಿರುವ ತಾಯಿಯು ಮಗುವಿಗೆ ಜನ್ಮ ನೀಡುವುದರಿಂದ ಹೆಚ್.ಐ.ವಿ. ಸೋಂಕು ಹರಡುತ್ತದೆ.
ಹೆಚ್.ಐ.ವಿ. ನಿಯಂತ್ರಣಾ ವಿಧಾನ :
ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ, ಸುರಕ್ಷಿತ ಲೈಂಗಿಕತೆಗೆ ನಿರೋಧ್ ಬಳಸುವುದು, ಹೊಸ ಸೂಜಿ/ ಸಿರಂಜ್‍ಗಳ ಬಳಕೆ, ಗರ್ಭಿಣಿ ಮಹಿಳೆಯರ ಹೆಚ್.ಐ.ವಿ. ಪರೀಕ್ಷೆಯನ್ನು ಸ್ವಯಂಪ್ರೇರಿತವಾಗಿ ಐ.ಸಿ.ಟಿ.ಸಿ.ಯಲ್ಲಿ ಮಾಡಿಸಿಕೊಂಡು, ಸೋಂಕಿದ್ದಲ್ಲಿ ಎ.ಆರ್.ಟಿ./ಎ.ಆರ್.ವಿ ಚಿಕಿತ್ಸೆಯನ್ನು ಪ್ರಾರಂಭಿಸುವುದರಿಂದ ಹೆಚ್‍ಐವಿ ಸೋಂಕು ಹರಡುವುದನ್ನು ನಿಯಂತ್ರಿಸಬಹುದು.
ಸೊಳ್ಳೆ, ಕೀಟಗಳು ಕಡಿಯುವುದರಿಂದ; ಸಾರ್ವಜನಿಕ ಶೌಚಾಲಯ ಬಳಸುವುದರಿಂದ; ಸೋಂಕಿತರು ಕೆಮ್ಮಿದಾಗ, ಸೀನಿದಾಗ; ಸೋಂಕಿತರ ಜೊತೆಯಲ್ಲಿ ಊಟ ಮಾಡುವುದರಿಂದ; ಸೋಂಕಿತರ ಬಟ್ಟೆ ಉಪಯೋಗಿಸುವುದರಿಂದ, ಸೋಂಕಿತರೊಂದಿಗೆ ಮಾತನಾಡುವುದರಿಂದ; ಸೋಂಕಿತರೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗುವುದರಿಂದ; ಸೋಂಕಿತರೊಂದಿಗೆ ಕೈ ಕುಲುಕುವುದರಿಂದ ಏಡ್ಸ್ ರೋಗ ಹರಡುವುದಿಲ್ಲ.
ಹೆಚ್.ಐ.ವಿ. ಪರೀಕ್ಷೆ ಎಲ್ಲಿ ಮಾಡಿಸಬಹುದು?
ಹೆಚ್.ಐ.ವಿ. ಪರೀಕ್ಷೆಯನ್ನು ವ್ಯಕ್ತಿಯು ಇಷ್ಟ ಪಟ್ಟಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ (ಐ.ಸಿ.ಟಿ.ಸಿ.) ಪರೀಕ್ಷಿಸಿಕೊಳ್ಳಬಹುದು. ಇದಲ್ಲದೆ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ 24*7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐ.ಸಿ.ಟಿ.ಸಿ. ಪರೀಕ್ಷಾ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು.
ಎ.ಆರ್.ಟಿ. ಚಿಕಿತ್ಸೆಯಿಂದ ಜೀವಿತಾವಧಿ ಹೆಚ್ಚಳ:
ಎ.ಆರ್.ಟಿ. ಚಿಕಿತ್ಸೆಯು ಹೆಚ್.ಐ.ವಿ ಸೋಂಕನ್ನು ವಾಸಿ ಮಾಡುವ ಚಿಕಿತ್ಸೆಯಲ್ಲ. ಆದರೆ ಸೋಂಕಿತರ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳುವಂತದ್ದಾಗಿರುತ್ತದೆ. ಜಿಲ್ಲಾ ಆಸ್ಪತ್ರೆ, ತಿಪಟೂರು ತಾಲ್ಲೂಕು ಆಸ್ಪತ್ರೆಯಲ್ಲಿ ಎ.ಆರ್.ಟಿ ಕೇಂದ್ರ ಹಾಗೂ 12 ಕಡೆ ಲಿಂಕ್ ಎ.ಆರ್.ಟಿ. ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಈ ಕೇಂದ್ರದಲ್ಲಿ ಎ.ಆರ್.ಟಿ. ಚಿಕಿತ್ಸೆ ನೀಡಲಾಗುವುದು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಚಟುವಟಿಕೆ :
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ತುಮಕೂರು 2008ರ ಆಗಸ್ಟ್ 27ರಿಂದ ಕಾರ್ಯರಂಭವಾಗಿದ್ದು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು, 3 ಜನ ಸಹಾಯಕರು ಹಾಗೂ ಒಬ್ಬ ಕಛೇರಿ ಸಹಾಯಕರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಜಿಲ್ಲೆಯಲ್ಲಿ 17 ಐಸಿಟಿಸಿ ಕೇಂದ್ರಗಳು, 144 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ಮೊಬೈಲ್ ಐ.ಸಿ.ಟಿ.ಸಿ. ಕೇಂದ್ರ ಹಾಗೂ 18 ಖಾಸಗಿ ಆಸ್ಪತ್ರೆಗಳಲ್ಲಿ ಐಸಿಟಿಸಿ ಸೇವೆ ಲಭ್ಯವಿರುತ್ತದೆ. ಸದರಿ ಕೇಂದ್ರಗಳಲ್ಲಿ 25 ಮಂದಿ ಆಪ್ತ ಸಮಾಲೋಚಕರು ಮತ್ತು 20 ಮಂದಿ ಪ್ರಯೋಗ ಶಾಲಾ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 3 ಎ.ಆರ್.ಟಿ. ಕೇಂದ್ರಗಳು, 12 ಲಿಂಕ್ ಎ.ಆರ್.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿವೆ.
ಜಿಲ್ಲೆಯಲ್ಲಿರುವ ಏಡ್ಸ್ ಸೋಂಕಿತರ ಅಂಕಿ-ಅಂಶ :
ಜಿಲ್ಲೆಯಲ್ಲಿ ಒಟ್ಟು 29ಲಕ್ಷ ಜನಸಂಖ್ಯೆಯಿದ್ದು, 2015ರ ಹೆಚ್.ಐ.ವಿ ಸೆಂಟಿನಲ್ ಸರ್ವೆಲೆನ್ಸ್ ಪ್ರಕಾರ ಹೆಚ್.ಐ.ವಿ ಪ್ರಿವಿಲೆನ್ಸ್ ರೇಟ್ 0.25%ರಷ್ಟಿರುತ್ತದೆ. ಕಳೆದ 5 ವರ್ಷದ ಅಂಕಿ ಅಂಶಗಳು ಈ ಕೆಳಕಂಡಂತಿದೆ.
ಹೆಚ್.ಐ.ವಿ. ಸೋಂಕಿತರ ಪ್ರಮಾಣ ಗಣನೀಯ ಇಳಿಕೆ :
ಈ ಮೇಲ್ಕಂಡ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್.ಐ.ವಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವಲ್ಲಿ ಜಿಲ್ಲೆಯ ಡ್ಯಾಪ್ಕೋ ಘಟಕ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯಲ್ಲಿ ಅರಿವು ಕಾರ್ಯಕ್ರಮದ ಯೋಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಯ ಸಹಯೋಗದೊಂದಿಗೆ ಇಲಾಖಾ ಸಿಬ್ಬಂದಿ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಪ್ರತಿನಿಧಿಗಳಿಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಹೆಚ್.ಐ.ವಿ. ಬಗ್ಗೆ ಉಚಿತ ಸಲಹೆ, ಸಮಾಲೋಚನೆಗಳಿಗೆ ಉಚಿತ ಸಹಾಯವಾಣಿ 1097ನ್ನು ಸಂಪರ್ಕಿಸಿ ಅಥವಾ ಹತ್ತಿರದ ಐಸಿಟಿಸಿ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಸನತ್ ತಿಳಿಸಿದ್ದಾರೆ.