ಚಿಕ್ಕನಾಯಕನಹಳ್ಳಿ:
ಜನಸಾಮಾನ್ಯರ ಬದುಕನ್ನು ಬೀದಿಗೆ ತಂದ ಬಿಜೆಪಿ ಸರ್ಕಾರ ಕೆಳಗಿಳಿಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮಾಜಿ ಸಚಿವ ಟಿ. ಬಿ.ಜಯಚಂದ್ರ ತಿಳಿಸಿದರು.
ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರಿಂದ ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಎತ್ತಿನಗಾಡಿ ಹಾಗೂ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ಮಾತನಾಡಿ ಪೆಟ್ರೋಲ್, ಡೀಸೆಲ್, ಗ್ಯಾಸ್‍ಗಳ ಬೆಲೆ ಗಗನಕ್ಕೆ ಏರಿದೆ, ಇದರ ಜೊತೆ ಅಗತ್ಯ ವಸ್ತುಗಳ ಬೆಲೆಯೂ ಎರಿದ್ದು ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಕೋವಿಡ್ ನಿಯಂತ್ರಣದಲ್ಲಿ ವಿಫಲವಾದ ಬಿಜೆಪಿ ಸರ್ಕಾರ ಕೇವಲ ಅಂಬಾನಿ, ಅದಾನಿಯಂತಹವರ ಬೃಹತ್ ಉದ್ಯಮಿಗಳ ಕೈಗೆ ದೇಶದ ಆರ್ಥಿಕತೆ ನೀಡುವ ಮೂಲಕ ಸರ್ಕಾರ ಉದ್ಯಮಿಗಳ ಕೈಗೊಂಬೆಯಾಗಿದೆ. ಇದರಿಂದ ಎಲ್ಲಾ ಶ್ರಮಿಕ ವರ್ಗಗಳ ಬದುಕು ಡೋಲಾಯಮಾನವೆನಿಸಿದೆ ಎಂದರು. ಎಂಎಲ್‍ಸಿ ರಮೇಶ್‍ಬಾಬು ಮಾತನಾಡಿ, ಕಾರ್ಪೊರೇಟ್ ಸರ್ಕಾರದ ಅಧೀನದಲ್ಲಿರುವ ಈ ಕ್ಷೇತ್ರ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೊಲಗುವವರೆಗೂ ಹೋರಾಟ ನಿಲ್ಲದು, ಜನ ವಿರೋಧಿ ನೀತಿಯ ಜಾರಿಯಲ್ಲಿ ಇಲ್ಲಿನ ಸಚಿವರೂ ಸಹ ಕೈಜೋಡಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಬಸವರಾಜು ಹಾಗೂ ವೈಸಿ ಸಿದ್ದರಾಮಯ್ಯ, ಗಿರೀಶ್ ಹೊಯ್ಸಳಕಟ್ಟೆ ಹಾಗೂ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆಯೊಂದಿಗೆ, ಮೆರವಣಿಗೆಯೊಂದಿಗೆ ತಾಲ್ಲೂಕು ಕಛೇರಿಗೆ ತೆರಳಿ ತಹಸೀಲ್ದಾರ್‍ರವರಿಗೆ ಮನವಿ ಸಲ್ಲಿಸಿದರು.