ತುಮಕೂರು:

      ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ತುಮಕೂರು ತಾಲೂಕಿಗೆ ಸಂಬಂಧಿಸಿದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಯೊಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಕಾರಣಾಂತರಗಳಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸಮಸ್ಯೆ ಉಂಟಾದ ಮಕ್ಕಳನ್ನು ಸರ್ಕಾರಿ ವಾಹನದಲ್ಲಿಯೇ ಕೇಂದ್ರಕ್ಕೆ ಕರೆತರಬೇಕು. ಸಕಾರಣವಿಲ್ಲದೆ ಮಕ್ಕಳು ಪರೀಕ್ಷೆಗೆ ಗೈರು ಹಾಜರಾದರೆ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಗೈರು ಹಾಜರಾಗಲು ಸಕಾರಣ ಇದ್ದರೆ ಅಂತಹ ಮಕ್ಕಳ ಪಟ್ಟಿಯನ್ನು ಡಿಡಿಪಿಐ ಅಥವಾ ಬಿಇಒಗಳಿಗೆ ಒದಗಿಸಬೇಕು. ಇಂತಹ ಮಕ್ಕಳು ಹಾಗೂ ಅವರ ಪೋಷಕರಿಗೆ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಕರೆತರಬೇಕು ಎಂದು ತಿಳಿಸಿದರು.

      ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದರೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಯಾರನ್ನೂ ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಬಾರದು. ಎಲ್ಲಾ ಮಕ್ಕಳು ಪರೀಕ್ಷೆ ಬರೆಯಲು ಸುರಕ್ಷತಾ ವಾತಾವರಣವನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು.
ಕೊರೋನಾ ಲಕ್ಷಣಗಳುಳ್ಳ ಮಕ್ಕಳನ್ನು ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಬೇಕು. ಲಕ್ಷಣಗಳಿರುವ ಅನುಮಾನ ಕಂಡು ಬಂದರೆ ಅಂತಹ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಾಜರಾದ ಮಕ್ಕಳಲ್ಲಿ ಲಕ್ಷಣ ಕಂಡು ಬಂದರೆ ಪ್ರತ್ಯೇಕವಾಗಿ ಪರೀಕ್ಷೆ ಬರೆಸಬೇಕು. ಕೋವಿಡ್ ಹೊರತುಪಡಿಸಿ ಯಾವುದೇ ರೋಗವಿದ್ದರೂ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಬರೆಯಲು ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.

(Visited 13 times, 1 visits today)