ತುಮಕೂರು: 

     ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಕಟ್ಟಿದ ಭಾರತವನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾರಾಟ ಮಾಡಿದ್ದು, ಕೇಂದ್ರ ಸ್ವಾಮ್ಯದ ಕೈಗಾರಿಕೆಗಳ ಖಾಸಗೀಕರಣ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಶಫೀವುಲ್ಲಾ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕಾರ್ಮಿಕ ಘಟಕ, ಎಸ್ಸಿ ಘಟಕ, ಕಿಸಾನ್ ಘಟಕ ಸೇರಿದಂತೆ ವಿವಿಧ ಮಂಚೂಣಿ ಘಟಕಗಳೊಂದಿಗೆ ತೈಲಬೆಲೆ ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದ ಸೈಕಲ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಕಿತ್ತುಕೊಂಡಂತೆ ಆಗಿದೆ, ಯುಪಿಎ ಸರ್ಕಾರದ ಅವಧಿಯಲ್ಲಿದ್ದ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಜನರ ಜೇಬನ್ನು ಲೂಟಿ ಮಾಡುತ್ತಿದ್ದು, ಜನ ವಿರೋಧಿ ಧೋರಣೆ ಹೊಂದಿರುವ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ನಿಯಂತ್ರಣ ಹಾಕದೇ ಇದ್ದರೆ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅದಾನಿ, ಅಂಬಾನಿಗೆ ರಿಸರ್ವ್ ಬ್ಯಾಂಕ್ ಇಂಡಿಯಾದಿಂದ 1.5 ಲಕ್ಷ ಕೋಟಿ ಹಣವನ್ನು ಪಡೆದು ಸಾಲವನ್ನು ಮನ್ನಾ ಮಾಡುತ್ತಾರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 96 ಸಾವಿರ ಕೋಟಿ ಸಾಲಮನ್ನಾ ಮಾಡುತ್ತಾರೆ, ಆದರೆ ಜನಸಾಮಾನ್ಯರಿಗೆ ನೀಡುವುದಿಲ್ಲ, ರೈತರು ತಿಂಗಳುಗಟ್ಟಲೇ ಪ್ರತಿಭಟನೆ ಮಾಡಿದರು ಸಹ ಅವರನ್ನು ಕಡೆಗಣಿಸುವ ಕೇಂದ್ರ ಸರ್ಕಾರ ಸಂಪೂರ್ಣ ಜನವಿರೋಧಿಯಾದದ್ದು ಎಂದು ಹೇಳಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ದೇಶದಲ್ಲಿದ್ದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು ಈಗಾಗಲೇ ಖಾಸಗೀಕರಣ ಮಾಡಿದ್ದಾರೆ, ಬ್ಯಾಂಕ್‍ಗಳನ್ನು ವಿಲೀನ ಮಾಡುವ ಮೂಲಕ ಗೌತಮ್ ಅದಾನಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾರೆ, ಜನರ ಆಸ್ತಿಯಾಗಿದ್ದ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಿದ್ದಾರೆ, ದೇಶವನ್ನು ಮಾರಾಟಕ್ಕೆ ಮಾಡಲಿಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂತಿದೆ ಎಂದು ಲೇವಡಿ ಮಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ತೊಗರಿ ಬೇಳೆ ಬೆಲೆ 70ರೂ ಆಗಿದ್ದಕ್ಕೆ ಬೀದಿಗೆ ಇಳಿದಿದ್ದ ಬಿಜೆಪಿ ಮುಖಂಡರು, ಇಂದು 170 ರೂ ಆಗಿದ್ದರು ಸಹ ಬಿಜೆಪಿ ಮುಖಂಡರು ಬಾಯಿಗೆ ಬೀಗ ಹಾಕಿಕೊಂಡಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಕೊರೋನಾ ಸಂದರ್ಭದಲ್ಲಿ ಜನ ಸಾಮಾನ್ಯರು ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದರು ಸಹ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮೂಲಕ ಲೂಟಿ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ಕೊರೋನಾ ಮೂರನೇ ಅಲೆ ಆತಂಕಕ್ಕೆ ಜನರನ್ನು ದೂಡಿ ಭಯವನ್ನು ಹುಟ್ಟಿಸುತ್ತಿದೆಯೇ ಹೊರತು ಪರಿಹಾರವನ್ನು ನೀಡುತ್ತಿಲ್ಲ, ರಾಜ್ಯದಲ್ಲಿರುವ ಜನರಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಿದ್ದೀರಿ? ಕಾಂಗ್ರೆಸ್ ಎಂದಿಗೂ ಸಹ ಜನವಿರೋಧಿಯಾಗಿ ನಡೆದುಕೊಂಡಿಲ್ಲ, ಆದರೆ ಬಿಜೆಪಿ ನೀಡುತ್ತಿರುವ ಪುಡಿಗಾಸಿನ ಪರಿಹಾರದಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಜನಸಾಮಾನ್ಯರ ಬಗ್ಗೆ ಯೋಚಿಸದ ಬಿಜೆಪಿ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಜನರು ತಿರಸ್ಕರಿಸಬೇಕು, ಬಿಜೆಪಿ ಎಂದಿಗೂ ಅಭಿವೃದ್ಧಿಯನ್ನು ಮಾಡುವುದಿಲ್ಲ, ದೇಶದಲ್ಲಿ ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ಸರ್ಕಾರ ಮಾತ್ರ ಎನ್ನುವುದನ್ನು ಜನರು ಅರಿತುಕೊಳ್ಳಬೇಕು, ಜನರನ್ನು ಬಡತನಕ್ಕೆ ದೂಡಿರುವ ಬಿಜೆಪಿ ವಿರುದ್ಧ ಜನರು ಸಂಘಟಿತವಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಜಕ್ಕಪ್ಪನವರ್, ಚಾಂದ್‍ಪಾಷ, ಗುಬ್ಬಿ ಶ್ರೀನಿವಾಸ್, ವೀರಣ್ಣಗೌಡ, ಶಬ್ಬು, ಭರತ್, ದಾದಾಪೀರ್, ಥಾಮ್ಸನ್, ಮಹಮ್ಮದ್ ಶಫೀಕ್ ಸಂಜೀವ್‍ಕುಮಾರ್, ಗುರುಪ್ರಸಾದ್, ಶಿವಾಜಿ, ಸಿದ್ಧಲಿಂಗೇಗೌಡ, ಪ್ರಕಾಶ್, ನಿಂಗರಾಜು, ಷಾಬಾಬು,ಅನಿಲ್, ಜಿ.ಎನ್.ಗೌಡ, ಹರೀಶ್, ಶಿವಪ್ರಸಾದ್, ಕೃಷ್ಣ, ಗೀತಾರುದ್ರೇಶ್, ಗೀತಾ ನಾಗೇಶ್, ನಾಗಮಣಿ, ಯಶೋಧ, ಮುಬೀನಾ, ಲಕ್ಷ್ಮೀ, ಎಸ್.ವಿ.ಗೀತಾ, ಡಾ.ಅರುಂಧತಿ, ರೂಪಶ್ರೀ, ಭಾಗ್ಯ, ಡಾ.ಲಕ್ಷ್ಮೀದೇವಿ ಭಾಗವಹಿಸಿದ್ದರು.

(Visited 8 times, 1 visits today)