ತುಮಕೂರು :
ಜಿಲ್ಲೆಯಲ್ಲಿ ಏಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಉನ್ನತೀಕರಣಕ್ಕೆ ಆಯ್ಕೆಯಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ‘ವಿಶ್ವ ಯುವ ಕೌಶಲ್ಯ ದಿನಾಚರಣೆ’ ಅಂಗವಾಗಿ ನಡೆದ ವಚ್ರ್ಯುಯಲ್ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸ್ಕಿಲ್ ಗ್ಯಾಪ್‍ನ್ನು ಹೊಂದಿಸಿಕೊಳ್ಳಲು ಅಗತ್ಯವಾದ ಕೌಶಲ್ಯ ಅಭಿವೃದ್ಧಿ ಪಡಿಸುವ ಸಲುವಾಗಿ ಟಾಟಾ ಟೆಕ್ನಾಲಜಿ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಪ್ರಥಮ ಹಂತದಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣ ಕಾರ್ಯ ಪಾರಂಭವಾಗಿದ್ದು, ಜಿಲ್ಲೆಯ 7 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಉನ್ನತೀಕರಣಕ್ಕೆ ಆಯ್ಕೆಯಾಗಿವೆ ಎಂದರು.
ಸ್ವಾತಂತ್ರ್ಯ ಪೂರ್ವದಿಂದಲೂ ಕೌಶಲ್ಯ ತರಬೇತಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಕೌಶಲ್ಯ ಸಂಬಂಧಿತ ಚಟುವಟಿಕೆಗಳಿಗಿರುವ ಮಹತ್ವವನ್ನು ಅರಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಗಳನ್ನು ಪ್ರಾರಂಭಿಸಿವೆ ಎಂದು ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಕವಿತಾ ಹಾಗೂ ಜಿಟಿಟಿಸಿ ಪ್ರಾಂಶುಪಾಲ ಗುರುಪ್ರಸನ್ನ. ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಹಾಯಕ ನಿಯಂತ್ರಣಾಧಿಕಾರಿ ನೂತನಶ್ರೀ ಎನ್. ಎಂಜಿಎನ್‍ಎಫ್‍ನ ರಿಜ್ಞಾನ್ ಅಹಮದ್, ನಲ್ಮ್ ಅಭಿಯಾನ ವ್ಯವಸ್ಥಾಪಕ ದೊಡ್ಡವಲಪ್ಪ ಹಾಗೂ ಎಟಿಡಿಸಿ ತರಬೇತಿ ಕೇಂದ್ರದ ಮುಖ್ಯಸ್ಥೆ ಕೋಮಲ ಅವರು ತಮ್ಮ ಇಲಾಖೆಯಡಿ ಲಭ್ಯವಿರುವ ಕೌಶಲ್ಯಾಭಿವೃದ್ಧಿ ಸಂಬಂಧಿತ ಚಟುವಟಿಕೆ/ತರಬೇತಿ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೌಶಲ್ಯಾಭಿವೃದ್ಧಿ ಇಲಾಖೆಯಡಿ ನಡೆಯುವ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸಭೆಗೆ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಸಹಾಯಕ ನಿರ್ದೇಶಕ ವಿಶ್ವೇಶ್ವರ ಬಿ., ವಿವಿಧ ಇಲಾಖೆ/ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಕೌಶಲ್ಯ ತರಬೇತಿ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.