ತುಮಕೂರು:
ಡಿಜಿಟಲ್ ಸಹಿಯ ಮುಖಾಂ ತರವೇ ಜನನ ಮರಣ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಾಗರಿಕ ನೋಂದಣಿ ಪದ್ಧತಿಯಡಿ ಜನನ-ಮರಣ ನೋಂದಣಿಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಜೂಮ್ ಮೀಟ್ ಮೂಲಕ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಸರಿಯಾಗಿ ಜನನ-ಮರಣ ಪ್ರಮಾಣ ಪತ್ರಗಳು ನೋಂದಣಿಯಾಗಲು ಸೂಕ್ತ ಕ್ರಮವಹಿಸಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೋಂದಣಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಸೂಚಿಸಿದರು.
ಮಾರ್ಗಸೂಚಿ ಅನ್ವಯ ಸಕಾಲಕ್ಕೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು.
ಇದರಿಂದ ಫಲಾನುಭವಿಗಳಿಗೆ ನೂರಕ್ಕೆ ನೂರರಷ್ಟು ಸೌಲಭ್ಯ ಲಭ್ಯವಾಗುತ್ತದೆ. ತಡವಾಗಿ ವಿತರಿಸಿದರೆ ಸೌಲಭ್ಯ ಕೈತಪ್ಪುವ ಸಾಧ್ಯತೆ ಇದೆ. ಹಾಗಾಗಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದರು.
ಪ್ರಮಾಣ ಪತ್ರಗಳಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಸಮರ್ಪಕವಾದ ಮಾಹಿತಿಯೊಂದಿಗೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.