ತುಮಕೂರು :
ಜಿಲ್ಲಾದ್ಯಂತ ಜುಲೈ 19 ಹಾಗೂ 22ರಂದು ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಚಿಕ್ಕನಾಯಕನಹಳ್ಳಿಯ 2534, ಗುಬ್ಬಿ ತಾಲ್ಲೂಕಿನ 3295, ಕುಣಿಗಲ್‍ನ 2856, ತಿಪಟೂರಿನ 2869, ತುಮಕೂರಿನ 10094, ಹಾಗೂ ತುರುವೇಕೆರೆಯ 2037 ಸೇರಿದಂತೆ ಒಟ್ಟು 23,686 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ತಿಳಿಸಿದ್ದಾರೆ.
ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 18, ಗುಬ್ಬಿ-22, ಕುಣಿಗಲ್-17, ತಿಪಟೂರು-14, ತುಮಕೂರು-53 ಹಾಗೂ ತುರುವೇಕೆರೆ 15 ಸೇರಿದಂತೆ ಒಟ್ಟು 139 ಪರೀಕ್ಷಾ ಕೇಂದ್ರಗಳಿದ್ದು, 13198 ಬಾಲಕರು ಹಾಗೂ 10488 ಬಾಲಕಿಯರು ಸೇರಿದಂತೆ ಒಟ್ಟು 23686 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ಸಕಲ ಸಿದ್ಧತೆ :-
ಕೋವಿಡ್-19ರ ಮಾರ್ಗಸೂಚಿ ಪ್ರಕಾರ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ಆರೋಗ್ಯ ತಪಾಸಣೆ(ಥರ್ಮಲ್ ಸ್ಕ್ಯಾನಿಂಗ್) ಮಾಡಲಾಗುವುದು. ಮಾಸ್ಕ್ ಧರಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸ್ ಸೌಲಭ್ಯ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬೆಳಿಗ್ಗೆ 8ರಿಂದಲೇ ಪ್ರವೇಶ ಪಡೆಯಬಹದಾಗಿದೆ. ವಿದ್ಯಾರ್ಥಿಗಳಿಗೆ ಕೊಠಡಿ ಹಂಚಿಕೆ ಮತ್ತು ಕಟ್ಟಡಗಳ ಮಾಹಿತಿಯನ್ನು ಶಾಲೆಯ ಆವರಣದ ಫಲಕದಲ್ಲಿ ನೋಡಿಕೊಳ್ಳಬಹುದಾಗಿದೆ.
ಪರೀಕ್ಷೆಯು ಬೆಳಿಗ್ಗೆ 10.30 ರಿಂದ ಆರಂಭವಾಗಲಿದ್ದು, ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಪ್ರವೇಶಿಸಿದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ 9-45 ಗಂಟೆಯವರೆಗೆ ಅಧ್ಯಯನ ಮಾಡಿಕೊಳ್ಳಬಹುದಾಗಿದ್ದು, 9-45ರ ನಂತರ ಕಡ್ಡಾಯವಾಗಿ ಪುಸ್ತಕಗಳನ್ನು ಕೊಠಡಿಯ ಹೊರಗೆ ನಿಗದಿಪಡಿಸಿದ ಜಾಗದಲ್ಲಿಡಬೇಕು.
ನಿಷೇಧಾಜ್ಞೆ ಜಾರಿ :-
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿμÉೀಧಾಜ್ಞೆ ಜಾರಿಗೊಳಿಸಲಾಗುವುದು. ನಿಷೇಧಾಜ್ಞೆಯು ಜುಲೈ 19 ಹಾಗೂ 22ರ ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಾವುದೇ ಜೆರಾಕ್ಸ್ ಅಂಗಡಿ ಮತ್ತು ಸ್ಟೇಷನರಿ ಅಂಗಡಿಗಳನ್ನು ತೆರೆಯುವಂತಿಲ್ಲ. ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳೆಂದು ಕಂಡು ಬಂದಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973 ಸೆಕ್ಷನ್ 107 ಮತ್ತು 110ರಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ :-
ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗವಿರುವ ಕಡೆಗಳಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಪರೀಕ್ಷಾ ಸಮಯಕ್ಕೆ ಅನುಗುಣವಾಗಿ ಸಂಚರಿಸುತ್ತವೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದಲ್ಲಿ ಪ್ರಯಾಣ ಉಚಿತವಾಗಿರುತ್ತದೆ. ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗ ಇಲ್ಲದ ಕಡೆಗಳಲ್ಲಿ ಪೋಷಕರ ಕೋರಿಕೆ ಮೇರೆಗೆ ಖಾಸಗಿ ಶಾಲಾ ಬಸ್‍ಗಳ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ.
ಸಮಸ್ಯೆಗಳಿದ್ದಲ್ಲಿ ದೂರವಾಣಿಯನ್ನು ಸಂಪರ್ಕಿಸಿ :-
ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಯಾವುದೇ ವಿದ್ಯಾರ್ಥಿಗೆ ಸಮಸ್ಯೆಗಳು ಎದುರಾದಲ್ಲಿ ಆಯಾ ತಾಲ್ಲೂಕಿನ ಬಿ.ಇ.ಓ. ಅಥವಾ ಇಲಾಖೆಯ ಉಪನಿರ್ದೇಶಕರು, ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ದೂ.ವಾ.ವಿವರ ಇಂತಿದೆ. ಚಿ.ನಾ.ಹಳ್ಳಿ-9480695352, ಗುಬ್ಬಿ-9480695353, ಕುಣಿಗಲ್-9480695355, ತಿಪಟೂರು- 9480695359, ತುಮಕೂರು-9480695360, ತುರುವೇಕೆರೆ-9480695361 ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳಾದ ತುಮಕೂರು ಡಿ.ಡಿ.ಪಿ.ಐ.-9448999352, ಡಿ.ಡಿ.ಪಿ.ಐ. ಕಚೇರಿ ಇ.ಓ.-9449126869/ 9880531417ನ್ನು ಸಂಪರ್ಕಿಸಬಹುದಾಗಿದೆ.
ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ ಪರೀಕ್ಷೆ ಬರೆಯಬೇಕು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ದೈಹಿಕ ಶಿಕ್ಷಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ವಯಂ ಸೇವಕರು ಉಪಸ್ಥಿತರಿದ್ದು, ಸಹಕರಿಸಲಿದ್ದಾರೆ.
ವಿದ್ಯಾರ್ಥಿಗಳು ಕುದಿಸಿ ಆರಿಸಿದ ನೀರು ಹಾಗೂ ಊಟದ ಡಬ್ಬಿಯನ್ನು ಮನೆಯಿಂದಲೇ ತರಬೇಕು. ಅವಶ್ಯಕತೆ ಇದ್ದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.