ತುಮಕೂರು:
ಕೈಗಾರಿಕಾ ಪ್ರದೇಶಗಳ ಸಮಸ್ಯೆ ಬಗೆಹರಿಸಲು ಕೆಎಸ್ ಎಸ್ ಐಡಿಸಿ, ಕೆಐಎಡಿಬಿ, ಮಹಾನಗರ ಪಾಲಿಕೆ ಸಂಯೋಜಿತ ಕಾರ್ಯನಿರ್ವಹಿಸುವ ಮೂಲಕ ಬಗೆಹರಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿರುವ ಟಿಡಿಸಿಸಿಐ ಕಚೇರಿ ಸಭಾಂಗಣದಲ್ಲಿ ಟಿಡಿಸಿಸಿಐ, ಅಂತರಸನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘ, ಅಂತರಸನಹಳ್ಳಿ ಮತ್ತು ಸತ್ಯ ಮಂಗಲ ಕೈಗಾರಿಕೆಗಳ ಸಂಘ, ಕೆಎಸ್‍ಎಸ್‍ಐಡಿಸಿ,ನಗರ, ಹಿರೇಹಳ್ಳಿ ಹಾಗೂ ಇತರೆ ಕೈಗಾರಿಕೆಗಳ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕ ಪ್ರದೇಶದ ಕುಂದುಕೊರತೆ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತಿದ್ದ ಅವರು, ನೀರಾವರಿ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ನೀಡಿದ್ದು, ಕೈಗಾರಿಕೆಗಳಿಗೆ ಉತ್ತಮ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೈಗಾರಿಕ ಪ್ರದೇಶಗಳಿಗೆ ನೀಡಬೇಕಿದೆ, ಕೈಗಾರಿಕೆಗಳಿಗೆ ಈಗ ಇರುವ ವ್ಯವಸ್ಥೆ ಸರಿಯಲ್ಲ, ಒಂದು ಟಿಸಿ ಹೋದರೆ ಇಡೀ ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತವಾದರೆ ಹೇಗೆ ಎಂದು ಪ್ರಶ್ನಿಸಿದ ಅವರು,ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ 450 ಕೋಟಿ ಯೋಜನೆ ರೂಪಿಸಲಾಗಿದೆ, ಪಾವಗಡ ಸೋಲಾರ್ ಪಾರ್ಕ್ ನಿಂದ ತುಮಕೂರಿಗೆ ಪ್ರತ್ಯೆಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ಯೋಜಿಸಲಾಗಿದ್ದು, ಅತಿ ಹೆಚ್ಚು ವಿದ್ಯುತ್ ಉತ್ಪಾದಿಸಿ, ಅದನ್ನು ಬಳಸಬೇಕಿದೆ.ಇದಕ್ಕಾಗಿ ಆಧುನಿಕ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಬೆಸ್ಕಾಂ ಇಲಾಖೆಗೆ ಅನುದಾನದ ಕೊರತೆ ಇಲ್ಲ, ಮುಖ್ಯಮಂತ್ರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಿತ್ತಿದ್ದಾರೆ, ಸಣ್ಣಪುಟ್ಟ ಸಮಸ್ಯೆ ಬಗೆಹರಿಸದೇ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ, ಆಧುನಿಕ ವ್ಯವಸ್ಥೆಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಿರುವುದರಿಂದ ತುಮಕೂರು ನಗರಕ್ಕಿಂತ ಹೆಚ್ಚಿನ ಸಮಸ್ಯೆ ಹುಬ್ಬಳ್ಳಿ ಧಾರವಾಡದಲ್ಲಿ ಆಗಿದೆ, ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಗಮನಕ್ಕೆ ತಂದಾಗ ಕ್ಯಾಬಿನೆಟ್‍ನಲ್ಲಿಟ್ಟು ಬಗೆಹರಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಉತ್ತಮ ಸಂಪರ್ಕ ರಸ್ತೆ ಇಲ್ಲದೇ ಇರುವ ಬಗ್ಗೆ ಉದ್ಯಮಿಗಳು ತಿಳಿಸಿದ್ದು, ಮುಂದಿನ ಎರಡು ವರ್ಷದೊಳಗೆ ನೆಲಮಂಗಲ ಕಿಂಗ್ ಫಿಶರ್ ಕಾರ್ಖಾನೆಯಿಂದ ಚೆಕ್ ಪೆÇೀಸ್ಟ್ ರಾಜಾ ಟೈಲ್ಸ್ ವರೆಗೆ ಹತ್ತುಪಥದ ರಸ್ತೆ ನಿರ್ಮಾಣವಾಗಲಿದ್ದು, ಮಿಸಿಂಗ್ ಲಿಂಕ್ ಹಾಗೂ ಅಂಡರ್ ಪಾಸ್ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಡಿಸಿಸಿಐಅಧ್ಯಕ್ಷ ಎಂ.ಎನ್.ಲೋಕೇಶ್ ಮಾತನಾಡಿ, ಕೆಎಸ್‍ಎಸ್‍ಐಡಿಸಿ ಕೈಗಾರಿಕಾ ಪ್ರದೇಶಗಳಲ್ಲಿ ದಂಡ ಮತ್ತು ಬಡ್ಡಿ ರಹಿತ ಆಸ್ತಿ ತೆರಿಗೆಗೆ ನೀಡಲಾಗಿದ್ದ ಒಟಿಎಸ್ ಅನ್ನು ಪುನಃ ಜಾರಿಗೆ ತಂದು ಒಂದು ವರ್ಷ ಕಾಲಾವಕಾಶ ನೀಡಲು ಸರಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಅಂತರಸನಹಳ್ಳಿ ಮತ್ತು ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ 2002ರಿಂದ ಆಸ್ತಿ ತೆರಿಗೆ ಕಟ್ಟುವಂತೆ ನೋಟೀಸ್ ನೀಡಿದ್ದು, ಅವೈಜ್ಞಾನಿಕ ಬಡ್ಡಿ ಮತ್ತು ದಂಡವನ್ನು ಕಟ್ಟುವಂತೆ ಸೂಚಿಸಿದ್ದಾರೆ, ಕೆಐಎಡಿಬಿ ಕೈಗಾರಿಕಾ ಪ್ರದೇಶವನ್ನು 2002ರಿಂದಲೂ ನಿರ್ವಹಣೆ ಮಾಡಿದ್ದು, ಮಹಾನಗರ ಪಾಲಿಕೆ 2002ರಿಂದಲೂ ತೆರಿಗೆ ಕಟ್ಟಲು ಸೂಚಿಸಿರುವುದನ್ನು ಹಿಂಪಡೆಯಬೇಕು, ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೆಕ ಕೈಗಾರಿಕಾ ವರ್ಗ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ನಿಂದ ಜಿಎಸ್ಟಿ ಕಟ್ಟಲು ಆಗಸ್ಟ್ ವರೆಗೆ ವಿನಾಯ್ತಿ ನೀಡಿದ್ದರು ಸಹ ದಂಡ ಹೆಚ್ಚುತ್ತಲೇ ಇದೆ, ಉದ್ಯಮಿಗಳು ತೆಗೆದುಕೊಂಡಿರುವ ಸಾಲ ಕೋವಿಡ್ ಕಾರಣದಿಂದ ಹೆಚ್ಚಳವಾಗಿದ್ದು, ಬ್ಯಾಂಕ್ ಸಾಲದ ಕಂತು ಹೆಚ್ಚಳವಾಗಿದೆ, ಇದರೊಂದಿಗೆ ಕೈಗಾರಿಕಾ ಪ್ರದೇಶ ಹಂಚಿಕೆಯಾಗಿದ್ದ ಸಮಯದಲ್ಲಿ ನಿಗದಿಯಾಗಿದ್ದ ಶುಲ್ಕಕ್ಕೆ ಶೇ.18ರಷ್ಟು ಏರಿಕೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಲು ಸೂಚಿಸಿದ್ದಾರೆ, ಇದರಿಂದ ಉದ್ದಿಮೆದಾರರಿಗೆ ಹೊರೆಯಾಗಿದ್ದು ಸರಕಾರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಜಿಎಸ್ಟಿ ಆಗಸ್ಟ್ ಅಂತ್ಯದವರೆಗೆ ಅವಕಾಶ, ಬಡ್ಡಿ ಹಾಕುತ್ತಲೇ ಇದ್ದಾರೆ, ಉದ್ಯಮಿಗಳ ಸಾಲದ ಕಂತು ಕೋವಿಡ್ ನಿಂದ ಹೆಚ್ಚಳವಾಗಿದೆ ಎರಡು ವರ್ಷದ ಕಾಲಾವಕಾಶ ಉಪಯೋಗವಾಗಲಿಲ್ಲ, ಈ ಹಿಂದೆ ನಿವೇಶನ ಪಡೆದಿದ್ದವರಿಗೆ ಹೆಚ್ಚುವರಿ ಹಣ ನೀಡಬೇಕಿದೆ, ಸಮಸ್ಯೆಗಳು ಹೆಚ್ಚಿದ್ದು ಸರ್ಕಾರ ನೆರವಿಗೆ ನಿಲ್ಲಬೇಕಿದೆ ಎಂದು ಮನವಿ ಮಾಡಿದರು.
ಟಿಡಿಸಿಸಿಐ ಅಧ್ಯಕ್ಷ ಎಂ.ಎನ್.ಲೋಕೇಶ್, ಉಪಾಧ್ಯಕ್ಷ ಗಿರೀಶ್, ಎನ್.ಎಸ್.ಜಯಕುಮಾರ್, ಇಂಡಸ್ಟ್ರೀ ಕಮಿಟಿ ಅಧ್ಯಕ್ಷ ಕುರಂದವಾಡ, ಟಿಡಿಸಿಸಿಐ ಕಾರ್ಯದರ್ಶಿ ಸತ್ಯನಾರಾಯಣ್, ಸಿ.ಎಸ್.ಮಂಜುನಾಥ್, ಡಿ.ಆರ್.ಮಲ್ಲೇಶಯ್ಯ, ಟಿ.ಆರ್.ಲೋಕೇಶ್, ಸೇರಿದಂತೆ ನಗರದ ಉದ್ಯಮಿಗಳು ಹಾಗೂ ಕೆಐಎಡಿಬಿ, ಮಹಾನಗರ ಪಾಲಿಕೆ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.