ತುಮಕೂರು:
ರಾಜಕಾರಣದಲ್ಲಿ ಬಡವರು ಮತ್ತು ಯಾರು ಅರ್ಹರಿರುತ್ತಾರೆ ಅವರೆಲ್ಲಾ ಅಧಿಕಾರಕ್ಕೆ ಬರುವಂತಹ ವಾತಾವರಣ ಸೃಷ್ಠಿಯಾದಾಗ ಮಾತ್ರ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಹೊರಪೇಟೆಯಲ್ಲಿರುವ ಶ್ರೀ ವಾಲ್ಮೀಕಿ ಕನ್ವೆಷನ್ ಹಾಲ್‍ನಲ್ಲಿ ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ದುಡ್ಡಿರುವವರು, ಕಳ್ಳ ದುಡ್ಡಿರುವವರು ಮುಂದೆ ಕಳ್ಳ ದುಡ್ಡು ಮಾಡುವವರು ಇಂತಹವರೇ ಅಧಿಕಾರಕ್ಕೆ ಬಂದರೆ ನಾವು ಅವರಿಂದ ಏನೂ ನಿರೀಕ್ಷೆ ಮಾಡುವುದಕ್ಕಾಗುವುದಿಲ್ಲ ಆದುದರಿಂದ ಬಡವರು ಮತ್ತು ಅರ್ಹರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು.
ಇಂದು ಯಾರೂ ಸಹ ಪ್ರಾಮಾಣಿಕವಾಗಿ ಬದುಕುವುದಕ್ಕೆ ರಾಜಕಾರಣದ ವ್ಯವಸ್ಥೆ ಬಿಡುತ್ತಿಲ್ಲ, ಇಂದು ಗ್ರಾಮ ಪಂಚಾಯಿತಿ ಸದಸ್ಯರಾಗಬೇಕೆಂದರೆ ಎರಡು ಎಕರೆ ಹೊಲ ಮಾರಬೇಕಾದ ಪರಿಸ್ಥಿತಿ ಬಂದೊದಗಿದೆ. ಸೋತವರು ಮಾರಬೇಕು, ಗೆದ್ದವರು ಮಾರಬೇಕು ಎಲ್ಲಿ ತರುತ್ತಾನೆ ದುಡ್ಡು, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯೂ ಇದಕ್ಕೆ ಹೊರತಾಗಿಲ್ಲ, ಇಂದು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಬೇಕೆಂದರೆ 1 ಕೋಟಿ ರೂ ಬೇಕಾಗುತ್ತದೆ. ವ್ಯವಸ್ಥೆ ಹೀಗಿರಬೇಕಾದರೆ ಬಡವರು ಅಧಿಕಾರಕ್ಕೆ ಬರುವುದಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದರು.