ತುಮಕೂರು:
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಲು ಅವರ ಪಕ್ಷದವರೇ ಹೊರಟಿರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ಯಡಿಯೂರಪ್ಪನವರು ಶಾಸಕರುಗಳನ್ನು ಖರೀದಿ ಮಾಡಿ ಕಷ್ಟಬಿದ್ದು ಸರ್ಕಾರ ರಚನೆ ಮಾಡಿದ್ದಾರೆ. ಬಹಳ ಆಸೆ ಇಟ್ಟುಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಸಂಪುಟದಲ್ಲಿದ್ದುಕೊಂಡು ಸಂಪುಟದ ಮುಖ್ಯಸ್ಥರನ್ನೆ ಬದಲಾಯಿಸಲು ಕೆಲವರು ಹೊರಟಿದ್ದಾರೆ. ಯಡಿಯೂರಪ್ಪನವರು ಶಕ್ತಿಯುತವಾಗಿದ್ದರೆ ಅಂತಹವರನ್ನು ಸಂಪುಟದಿಂದ ಕೈ ಬಿಡಬೇಕು ಎಂದರು.
ನಗರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಬದಲಾಯಿಸಲು ಹೊರಟಿರುವವರು ಶಕ್ತಿಯುತವಾಗಿದ್ದರೆ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು. ಇದ್ಯಾವುದನ್ನೂ ಮಾಡದೆ ವಿನಾ ಕಾರಣ ಕಾಲ ಹರಣ ಮಾಡುತ್ತಿರುವುದರಿಂದ ರಾಜ್ಯದ ಆಡಳಿತ ಮತ್ತು ಜನಸಮುದಾಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದರು.
ಸರ್ಕಾರದ ಜಿಲ್ಲಾ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿಗಳು ಮಾಡಿರುವ 15 ಸಾವಿರ ಕೋಟಿ ಬಿಲ್‍ಗಳು ಬಾಕಿ ಇವೆ. ಪಿಡಬ್ಯ್ಲೂಡಿ ಇಲಾಖೆ ಒಂದರದ್ದೇ 5 ಸಾವಿರ ಕೋಟಿ ಬಾಕಿ ಇದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಜಾತಿ, ಹಣದ ಮೇಲೆ ರಾಜಕಾರಣ ನಡೆಯುತ್ತಿದೆ ಎಂಬುದು ಎಲ್ಲರಿಗೆ ಗೊತ್ತಿರುವಂತಹದ್ದು. ಇದನ್ನು ಹೊರತುಪಡಿಸಿ ಕರ್ನಾಟಕದ ರಾಜಕಾರಣ ನಡೆಯಬೇಕು ಎಂಬುದ ನಮ್ಮೆಲ್ಲರ ಬಯಕೆ ಎಂದರು. ಕಾಂಗ್ರೆಸ್ ಚುನಾವಣೆಗೆ ಈಗಾಗಲೇ ಸನ್ನದ್ಧವಾಗಿದೆ. ಡಿಸೆಂಬರ್ ಒಳಗೆ ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.