ಹುಳಿಯಾರು:
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ಎಚ್ಚರಿಸಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿದೇಯಕ ಯಥಾವತ್ತು ಜಾರಿ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
15 ವರ್ಷ ಆಗಿರುವ ಹಾಲು ಕೊಡಲು ಯೋಗ್ಯವಲ್ಲ, ಉಳಿಮೆ ಮಾಡಲು ಯೋಗ್ಯವಲ್ಲ ಎನ್ನುವ ಪ್ರಮಾಣ ಪತ್ರವನ್ನು ಪಶು ವೈದ್ಯರು ಕೊಟ್ಟ ನಂತರ ಗೋಹತ್ಯೆ ಮಾಡಬಹುದಿದೆ. ಮಾರುವವನೂ ಸಹ ಗ್ರಾಪಂನಿಂದ ಹಸು ಸಾಕುತ್ತಿರುವ ಬಗ್ಗೆ ದಾಖಲಾತಿ ಇಟ್ಟಿರಬೇಕು. ಹಾಗಾಗಿ ಇನ್ಮುಂದೆ ಗೋಹತ್ಯೆ ಮಾಡುವುದು ಅಸಾಧ್ಯವಾಗಿದ್ದು ಕೋಳಿ, ಕುರಿ ಮಾಂಸ ಮಾರಿ ಜೀವನ ನಿರ್ವಹಿಸಿ. ಇಲ್ಲವಾದಲ್ಲಿ ಪರ್ಯಾಯ ಉದ್ಯೋಗ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಸರ್ಕಾರದಿಂದ ಗೋಶಾಲೆ ತೆರೆಯುತ್ತಿದ್ದು ಹಸುಗಳನ್ನು ಸಾಕಲಾಗುವುದಿಲ್ಲ ಎನ್ನುವ ರೈತರು ಗೋಶಾಲೆಗೆ ಬಿಡಬಹುದಾಗಿದೆ. ಸರ್ಕಾರವೇ ಅವುಗಳ ಆರೈಕೆಯ ಹೊಣೆ ಹೊರಲಿದೆ. ಈ ಹಿಂದೆ ಸಾರಾಯಿ ಮಾರುತ್ತಿದ್ದವರು ನಿಷೇಧವಾದ ನಂತರ ಬೇರೆ ಉದ್ಯೋಗ ಮಾಡಿ ಜೀವನ ನಡೆಸುತ್ತಿದ್ದಾರೆ. ಗೋ ಮಾಂಸ ಮಾರುತ್ತಿರುವವರು ಇನ್ಮುಂದೆ ಬೇರೆ ಉದ್ಯೋಗ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನಿನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದರು.
ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಪಪಂ ಅಧಿಕಾರಿಗಳಾದ ಉಮೇಶ್, ಜುನೇದ್ ಉಪಸ್ಥಿತರಿದ್ದರು.