ಜನರ ಜೀವನಾಡಿಯಾಗಬೇಕಿದ್ದ ಜಯಮಂಗಲಿ ನದಿ ಮರಳು ಲೂಟಿಕೋರರ ತೋಳ್ತೆಕ್ಕೆಗೆ ಸಿಲುಕಿ ಅವಸಾನದ ಅಂಚನ್ನು ತಲುಪಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಹಾಗೂ ಮಧುಗಿರಿಯ ಮಧ್ಯಭಾಗದಲ್ಲಿ ಹರಿಯುವ ಜಯಮಂಗಲಿ ನದಿಯ ನೀರಿನಿಂದ ಬರಗಾಕಲದ ನಡುವೆ ರೈತರು ಹಸನ್ಮುಖಿಯಾಗುತ್ತಿದ್ದರು. ನದಿಯ ಆಸು-ಪಾಸಿನ ರೈತರು ಆ ಭಾಗದ ರೈತಾಪಿವರ್ಗ ಜಯಮಂಗಲಿಯನ್ನೇ ಅವಲಂಬಿಸಿ ಕೃಷಿಯಲ್ಲಿ ತೊಡಗುತ್ತಿತ್ತು.
ಆದರೆ, ಭ್ರಷ್ಟ ರಾಜಕಾರಣಿಗಳ ಚೇಲಾಗಳು ನದಿಯ ಭಾಗದಲ್ಲಿ ನಿರಂತರವಾಗಿ ಮರಳನ್ನು ಬಗೆಯುತ್ತಿರುವುದರಿಂದ ಮರಳು ಲೂಟಿಕೋರರ ಹಣದ ದಾಹಕ್ಕೆ ರೈತರ ಜೀವಸೆಲೆಯಾಗಬೇಕಿದ್ದ ಜಯಮಂಗಲಿ ನದಿ ಅವಸಾನದ ಅಂಚು ತಲುಪಿದ್ದು, ಜಯಮಂಗಲಿ ನದಿಯ ಆಸು-ಪಾಸಿನ ಜಮೀನುಗಳಲ್ಲಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಬಾರದೆ,ರೈತಾಪಿ ವರ್ಗ ಪರಿತಪಿಸುವಂತಾಗಿದೆ. ಇದಕ್ಕೆ ಕಾರಣ ಮರಳು ಮಾಫಿಯಾ ಅತಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕದ ಅಧಿಕಾರಿ ವರ್ಗ ಲಂಚದ ದಾಹಕ್ಕೆ ಸಿಲುಕಿ ಜಯಮಂಗಲಿಯ ಒಡಲಾಳವನ್ನು ಬಗೆಯಲು ಸಹಕರಿಸುತ್ತಿದ್ದಾರೆ. ಅಕ್ರಮ ಮರಳು ಮಾಫಿಯಾದೊಂದಿಗೆ ಕೈಜೋಡಿಸಿರುವ ಭ್ರಷ್ಟ ಅಧಿಕಾರಿ ವರ್ಗ ಲೂಟಿಕೋರರ ಅಕ್ರಮಗಳಿಗೆ ಹಸ್ತಲಾಘವ ಮಾಡುತ್ತಾ ಲಂಚದ ಆಮಿಷಕ್ಕೆ ಬಲಿಯಾಗಿ ಹಾಡುಹಗಲೇ ರಾಜಾರೋಷವಾಗಿ ಜಯಮಂಗಲಿಯ ತಪ್ಪಲಲ್ಲಿ ಅಕ್ರಮ ಮರಳುಗಾರಿಕೆಗೆ ಕಾರಣೀಬೂತರಾಗಿದ್ದಾರೆ
ತುಮಕೂರು ನಗರಕ್ಕೆ ತನ್ನ ಬಾಹುಗಳನ್ನ ಚಾಚಿಕೊಂಡಿರುವ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಜನಿಸುವ ಜಯಮಂಗಲಿ ಹರಿಯುವುದು ಕೊರಟಗೆರೆ ಮತ್ತು ಮಧುಗಿರಿಯೆಡೆಗೆ ಎರಡು ತಾಲ್ಲೂಕಿನ ಭಾಗದ ರೈತರಿಗೆ ಜೀವಸೆಲೆಯಾಗಬೇಕಿದ್ದು, ನೆರೆ ರಾಜ್ಯ ಆಂಧ್ರದ ಓಬಳಾಪುರದ ವರೆಗೂ ಹರಿಯುವ ಈ ನದಿ ಇತ್ತೀಚಿನ ಅಕ್ರಮ ಮರಳು ಮಾಫಿಯಾಕ್ಕೆ ತುತ್ತಾಗಿ ಬರಿದಾಗಿ ಹೋಗಿದೆ. ಎತ್ತ ನೋಡಿದರತ್ತ ಅಲ್ಲಲ್ಲಿ ಬಗೆದ ಮರಳು ಗುಂಡಿಗಳು ಜಯಮಂಗಲಿಯನ್ನು ಸರ್ವನಾಶದಂಚಿಗೆ ತಂದೊಡ್ಡಿದೆ. ಇನ್ನಾದರೂ ಅಧಿಕಾರಿವರ್ಗ ಇದಕ್ಕೆ ಕಡಿವಾಣ ಹಾಕಲಿ ಎಂದರು.
(Visited 128 times, 1 visits today)