ಕೊರಟಗೆರೆ:
ಸ್ವಾತಂತ್ರ್ಯದ ನಂತರ ಭಾರತದ ಶಿಕ್ಷಣವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಯಾಗಿದ್ದು, ಕೊರಟಗೆರೆ ವಿಧಾನಸಭಾ ವ್ಯಾಪ್ತಿಯಲ್ಲು ಸಹ ಪ್ರತಿಭಾನ್ವಿತ ಬಡ ಮಕ್ಕಳಿಗೆ 100 ಕೋಟಿ ರೂಗಳ ಅನುದಾನದ ಬೃಹತ್ ವಸತಿಶಾಲೆಗಳನ್ನು ನಿರ್ಮಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಸಮೀಪದ ನೇಗಳಾಲ ಗ್ರಾಮದ ಹೊರವಲಯದಲ್ಲಿ 24.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದೀರಾಗಾಂಧಿ ವಸತಿ ಶಾಲೆಯ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿ, ಸ್ವತಂತ್ರ ನಂತರ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನು ಕಂಡಿದೆ. 1951ರಲ್ಲಿ ಶೇಕಡ 18.33 ರಷ್ಟಿದ ಸಾಕ್ಷಾರತಾ ಪ್ರಮಾಣವು 2011ರ ಹೊತ್ತಿಗೆ ಶೇಕಡ 74.04 ಕ್ಕೆ ಮಟ್ಟಕ್ಕೆ ಏರಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯಾಗಿದೆ. ಅದಕ್ಕಾಗಿ ಸರ್ಕಾರವು ಸಾವಿರಾರು ಕೋಟಿ ಯೋಜನೆಗಳನ್ನು ಅಕ್ಷರಜ್ಞಾನಕ್ಕಾಗಿ ನೀಡುತ್ತಿದೆ. ಸಮಾಜದಲ್ಲಿ ಬಡವರು,ತುಳಿತಕ್ಕೆ ಒಳಗಾದವರು ಶಿಕ್ಷಣದಿಂದ ಉನ್ನತ ಸ್ಥಾನವನ್ನು ತಲುಪಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್ ರವರ ಹೋರಾಟ ಮತ್ತು ಶ್ರಮದ ಸಾರ್ಥಕತೆ ಶಿಕ್ಷಣವ್ಯವಸ್ಥೆಯಿಂದ ಮಾತ್ರ ಸಾದ್ಯವಾಗುತ್ತಿದೆ. ನಮ್ಮ ಪರಿಸರ ಬದಲಾವಣೆಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನ ಮಕ್ಕಳು ಕಡ್ಡಾಯ ಶಿಕ್ಷಣವನ್ನು ಪಡೆಯಬೇಕು. ಗುಣಾತ್ಮಕ, ಸಾಮಾನ್ಯ ಜ್ಞಾನದ ಶಿಕ್ಷಣವು ಪ್ರಸ್ತುತ ವಿದ್ಯಾಮಾನಗಳಿಗೆ ಅತೀ ಅವಶ್ಯಕತೆಇದ್ದು, ಇದರಿಂದ ಸಮಾನಾಂತರ ವ್ಯಕ್ತಿತ್ವದ ಮನಸುಗಳು ಮೂಡಿ ಮೇಲುಕೀಳುಗಳ ಭಾವನೆಯನ್ನು ತೊಲಗಿಸಬಹುದು ಎಂದರು.
ಕೊರಟಗೆರೆ ತಾಲ್ಲೂಕಿನಲ್ಲಿ ಶಾಸಕನಾಗಿದ್ದ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರಸರ್ಕಾರದಿಂದ 16 ಕೋಟಿ ರೂಗಳ ಏಕಲವ್ಯ ವಸತಿಶಾಲೆಯನ್ನು ಪರಿಶಿಷ್ಟ ಪಂಗಡಕ್ಕಾಗಿ ನಿರ್ಮಾಣ ಮಾಡಲಾಯಿತು. ಅದೇ ರಿತಿಯಾಗಿ ಹುಲಿಕುಂಟೆ ಗ್ರಾಮದ ಬಳಿ ಕೋಟ್ಯಾಂತರ ರೂಗಳ ವೆಚ್ಚದಲ್ಲಿ ಹೆಣ್ಣುಮಕ್ಕಳಿಗಾಗಿ ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆ, ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು , ರೆಡ್ಡಿಕಟ್ಟೆ ಭಾರಿ ಮತ್ತು ಬೈಚಾಪುರದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸರ್ಕಾರಿ ಜಾಗವನ್ನು ಗುರ್ತಿಸಿ ನಿರ್ಮಾಣ ಮಾಡಲಾಯಿತು. ಇದರೊಂದಿಗೆ ಪಟ್ಟಣದಲ್ಲಿರುವ ಹೆಣ್ಣುಮಕ್ಕಳ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳನ್ನು ಸಹ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರಸ್ತುತ ನೇಗಳಾಲ ಬಳಿ 24.5 ಕೋಟಿರೂಗಳಲ್ಲಿ ಇಂದಿರಾಗಾಂಧಿ ವಸತಿಶಾಲೆ ಕೋಳಾಲ ಬಳಿ 24.5 ಕೋಟಿ ರೂಗಳಲ್ಲಿ ಅಂಬೇಡ್ಕರ್ ವಸತಿಶಾಲೆಗಳು ನಿರ್ಮಾಣ ಮಾಡಲಾಗುತ್ತಿದ್ದು, ಇಂದು ಕಟ್ಟಡ ನಿರ್ಮಾಣವನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಎಲ್ಲಾ ಶಾಲೆಗಳಿಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರಗಳು ಒದಗಿಸುತ್ತವೆ. ಆದರೆ ಸರ್ಕಾರದ ಯೋಜನೆಗಳನ್ನು ಜನರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ಮಾತ್ರ ಸಾರ್ಥಕವಾಗುತ್ತವೆ. ಕೊರಟಗೆರೆ ಕ್ಷೇತ್ರದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬೆಳವಣಿಗೆಗೆ ಶ್ರಮವಹಿಸಿ ಕರ್ತವ್ಯ ನಿರ್ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜು, ಬೆಸ್ಕಾಂ ಎಇಇ ಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆಶಂಕರ್ , ಕೋಡ್ಲಹಳ್ಳಿ ಅಶ್ವಥನಾರಾಯಣ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಮೈಲಾರಪ್ಪ, ಯುವಾಧ್ಯಕ್ಷ ವಿನಯ್‍ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ ಟಿ.ಸಿ.ರಾಮಯ್ಯ , ಉಪಾಧ್ಯಕ್ಷ ವೆಂಕಟಪ್ಪ ಮುಖಂಡರುಗಳಾದ ನಾಗಭೂಷಣ್, ಹುಲಿಕೂಂಟೆ ಪ್ರಸಾದ್, ದಾಸರಹಳ್ಳಿ ರಮೇಶ್, ಚಿಕ್ಕರಂಗಯ್ಯ, ರಂಗಧಾಮಯ್ಯ, ರಂಗರಾಜು, ಗುರುಸಿದ್ದಪ್ಪ, ಕುಮಾರಸ್ವಾಮಿ , ನಂಜುಂಡಯ್ಯ, ಅರವಿಂದ್, ಮಂಜುನಾಥ್ ಕೆ.ಎಲ್ ಇತರರು ಹಾಜರಿದ್ದರು.
ಚಿತ್ರ: ತಾಲ್ಲೂಕಿನ ನೇಗಳಾಲ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಇಂದಿರಾಗಾಂಧೀ ವಸತಿಶಾಲೆಯ ಕಟ್ಟಡ ಪರಿಶೀಲಿಸುತ್ತಿರುವ ಶಾಸಕ ಡಾ.ಜಿ ಪರಮೇಶ್ವರ್.