ತುಮಕೂರು:
ಜಿಲ್ಲೆಯಲ್ಲಿ ದೇವಾಲಯ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಲ್ಲಿ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯಗಳನ್ನು 25-7-2021 ರಿಂದ ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಸರ್ಕಾರದ ಹೊಸ ಕೋವಿಡ್ 19 ಮಾರ್ಗಸೂಚಿಯಲ್ಲಿ ಇನ್ನಷ್ಷು ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದ್ದು, ಇದರನ್ವಯ ಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಧಾರ್ಮಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಪೂಜಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಜಾತ್ರೆ, ದೇವಾಲಯ ಉತ್ಸವ, ಮೆರವಣಿಗೆ, ಸಭೆಗಳಿಗೆ ಅವಕಾಶವಿಲ್ಲ.
ಅದೇ ರೀತಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಮನೋರಂಜನಾ ಸ್ಥಳ, ಉದ್ಯಾನವನ/ ಪಾರ್ಕ್ ಗಳನ್ನು ಪುನಃ ತೆರೆಯಲು ಅನುಮತಿ ಇದೆ. ಆದರೆ ಜಲ ಕ್ರೀಡೆ / ಜಲ ಸಂಬಂಧಿತ ಸಾಹಸ ಚಟುವಟಿಕೆಗಳಿಗೆ ಅನುಮತಿ ಇಲ್ಲ. ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಮಾಸ್ಕ್ ಧಾರಣೆ, ಕೈ-ಸ್ವಚ್ಛತೆಗಾಗಿ ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.