ತುಮಕೂರು : 

      ಜಿಲ್ಲೆಯ ಸ್ಥಳೀಯ ಸಂಸ್ಥಗಳ ಕ್ಷೇತ್ರದಿಂದ ಡಿಸೆಂಬರ್ 10ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯನ್ನು ನಿಷ್ಪಕ್ಷಪಾತ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

      ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿಂದು ಜರುಗಿದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಸಂಬಂಧ ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ಪಡೆದು ಯಾವುದೇ ಲೋಪದೋಷಗಳಿಲ್ಲದಂತೆ ಹಾಗೂ ಯಾವುದೇ ಅಹಿತಕರ ಘಟನೆಗೆ ಆಸ್ಪದ ಮಾಡಿಕೊಡದಂತೆ ಚುನಾವಣೆಯನ್ನು ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‍ಗಳಿಗೆ ಸೂಚನೆ ನೀಡಿದರು.

      ಈ ಚುನಾವಣೆಯಲ್ಲಿ 6 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 5559 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಎಂದಿನಂತೆ ನಡೆಯುವ ಸಾರ್ವತ್ರಿಕ ಚುನಾವಣೆ ವಿಧಾನಕ್ಕಿಂತ ವಿಧಾನ ಪರಿಷತ್ ಚುನಾವಣಾ ವಿಧಾನ ಭಿನ್ನವಾಗಿದ್ದು, ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರಲ್ಲದೆ, ಚುನಾವಣೆಯ ದಿನ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಪೂರ್ಣ ಸಮಯದವರೆಗೆ ಮತ ಕೇಂದ್ರಗಳಲ್ಲಿ ಹಾಜರಿದ್ದು, ಕಾರ್ಯ ನಿರ್ವಹಿಸಬೇಕು ಎಂದರು.

      ಚುನಾವಣೆಯಲ್ಲಿ ಗ್ರಾ.ಪಂ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಯ ಚುನಾಯಿತ ಸದಸ್ಯರುಗಳು ಮತದಾರರಾಗಿದ್ದು, ಪಾಲಿಕೆ ಸೇರಿದಂತೆ ಸರ್ಕಾರಿ ಕಚೇರಿಗಳು ಮತಕೇಂದ್ರಗಳಾಗಿರುತ್ತವೆ. ಪ್ರತೀ ಮತ ಕೇಂದ್ರಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ವೈಯಕ್ತಿಕ ಆಸಕ್ತಿಗಳಿಗೆ ಎಡೆ ಮಾಡಿಕೊಡದೆ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಸಂಪೂರ್ಣ ಜವಾಬ್ದಾರಿ ಹಾಗೂ ಅಧಿಕಾರವನ್ನು ಪ್ರಿಸೈಡಿಂಗ್ ಅಧಿಕಾರಿ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ವಹಿಸಲಾಗಿದೆ. ಅಲ್ಲಿನ ಪಿಡಿಒ ಅಥವಾ ಕಾರ್ಯದರ್ಶಿಗಳು ಮತದಾರರನ್ನು ಗುರುತಿಸುವ ಅಧಿಕಾರ ಹೊಂದಿರುತ್ತಾರೆ. ಚುನಾವಣಾ ಸಮಿತಿಯ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.
ನಂತರ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪೂರ್ವ ಹಾಗೂ ಮತದಾನ ನಂತರದ ಮತಗಟ್ಟೆಗಳ ಸಿದ್ಧತೆ, ನಮೂನೆಗಳ ಸಿದ್ಧಪಡಿಕೆ, ಸಹಿ-ಮೊಹರು, ಮತಪೆಟ್ಟಿಗೆಗಳ ಸೀಲಿಂಗ್, ಸಿಂಧು ಮತ್ತು ಅಸಿಂಧು ಮತಗಳು, ಮತದಾರರೊಂದಿಗೆ ಬರುವ ಅನುಮತಿಸಿದ ವ್ಯಕ್ತಿಗಳ ಹಕ್ಕುಗಳು, ಪಿಆರ್‍ಒ ಹಾಗೂ ಎಪಿಆರ್‍ಒ ಅಧಿಕಾರಿಗಳ ಜವಾಬ್ದಾರಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.

      ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಯಟ್ ಪ್ರಿನ್ಸಿಪಲ್ ಮಂಜುನಾಥ್, ಮಾಸ್ಟರ್ ಟ್ರೈನರ್ ರಂಗಧಾಮಯ್ಯ, ಎಲ್ಲಾ ತಾಲೂಕಿನ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಪೋಲಿಂಗ್ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

 

 

 

(Visited 15 times, 1 visits today)