ತುಮಕೂರು :
ಎತ್ತಿನಹೊಳೆ ಯೋಜನೆಗೆ ಜಿಲ್ಲೆಯಲ್ಲಿ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಬೆಲೆಯನ್ನು ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಮೇಲ್ಗಾಲುವೆ ನಿರ್ಮಾಣದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್‍ನಿರ್ಮಾಣ ಪ್ರಯೋಜನಗಳ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಎತ್ತಿನ ಹೊಳೆ ಯೋಜನೆಗಾಗಿ ರೈತರು ಜಮೀನು, ಮನೆ ಹಾಗೂ ಮರಗಳನ್ನು ಕಳೆದುಕೊಳ್ಳಲಿದ್ದಾರೆ. ಇಂತಹ ರೈತರು ಉತ್ತಮ ಬೆಲೆಯನ್ನು ನೀಡುವಂತೆ ನನಗೆ ಮನವಿ ಮಾಡುತ್ತಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಉತ್ತಮ ಬೆಲೆಯನ್ನು ನಿಗಧಿಪಡಿಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎತ್ತಿನ ಹೊಳೆ ಕುಡಿಯುವ ನೀರು ಯೋಜನೆಯ 10.47 ಕಿ.ಮೀ. ಉದ್ದದ ಮೇಲ್ಗಾಲುವೆ ಹಾಗೂ 0.542 ಕಿ.ಮೀ. ಉದ್ದದ ಮುಖ್ಯ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನದಿಂದ ಜೀವನೋಪಾಯ ಕಳೆದುಕೊಳ್ಳುವ ರೈತರಿಗಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಯೋಜನೆಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಕೆ. ಅವರು ಸಭೆಗೆ ವಿವರಿಸಿದರು.
ಯೋಜನೆಯಿಂದ ಸಂಪೂರ್ಣ ಮನೆ ಕಳೆದುಕೊಳ್ಳುವವರಿಗೆ 5ಲಕ್ಷ ರೂ.ಗಳನ್ನು ನೀಡಬಹುದಾಗಿದೆ. ಸ್ಥಳಾಂತರಿತ ಕುಟುಂಬದವರಿಗೆ ಸಾರಿಗೆ ವೆಚ್ಚಕ್ಕಾಗಿ 50ಸಾವಿರ ನೀಡಲಾಗುತ್ತಿದೆ. ಭೂಸ್ವಾಧೀನಕ್ಕಾಗಿ ರೈತರಿಗೆ ಜಮೀನು ದರದ ಜೊತೆಗೆ ಪುನರ್ವಸತಿ ಪ್ರಯೋಜನಗಳು ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಯೋಜನೆಗಾಗಿ ಮನೆ, ಮಠ, ಜಮೀನು ಕಳೆದುಕೊಳ್ಳುವ ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವ ರೀತಿಯಲ್ಲಿ ಇರಬಾರದು. ರೈತರಿಗೆ ತಾರತಮ್ಯವಾಗದ ರೀತಿಯಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಹೇಮಾವತಿ ನಾಲೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಇದಕ್ಕಾಗಿ ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬೇಗ ಪಡೆದುಕೊಳ್ಳಿ ಎಂದು ಭೂಸ್ವಾಧೀನಾಧಿಕಾರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ಸಂಬಂಧಿಸಿದಂತೆ ರೈತರೊಂದಿಗೆ ಸಭೆ ನಡೆಸದೆಯೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೊದಲು ರೈತರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯವನ್ನು ಪಡೆಯಿರಿ. ಅಲ್ಲಿಯವರೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ರೈತರೊಂದಿಗೆ ಸಭೆ ನಡೆಸಿ ಯೋಜನೆಯ ಕುರಿತಂತೆ ಚರ್ಚಿಸಿ ಅವರಿಂದ ಅಭಿಪ್ರಾಯ/ ಒಪ್ಪಿಗೆ ಪಡೆಯಿರಿ ಎಂದು ಎತ್ತಿನ ಹೊಳೆ ಯೋಜನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಗಳಲ್ಲಿ ನೀರು ಇರುವುದಿಲ್ಲ. ಹೇಮಾವತಿ ನಾಲೆಯಿಂದ ನೀರು ಹರಿಸಿರಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಹಾಗೂ ಶಾಸಕರು ಹೇಳಿದರು.
ಸಭೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಸೇರಿದಂತೆ ಎತ್ತಿನ ಹೊಳೆ ಯೋಜನೆಯ ಅಧಿಕಾರಿಗಳು ಹಾಜರಿದ್ದರು.