ತುಮಕೂರು :
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹೇಮಾವತಿ ನಾಲಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಛೇರಿ ಮೇಲೆ ದಾಳಿ ನಡೆಸಿ ಸಹ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.
ನಗರದ ಕುಣಿಗಲ್ ರಸ್ತೆಯಲ್ಲಿ ಹೇಮಾವತಿ ನಾಲಾ ಕಛೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಛೇರಿ ಮೇಲೆ ನೆನ್ನೆ(ಡಿ.೬) ಸಂಜೆ ಎಸಿಬಿ ಕೇಂದ್ರ ವಲಯ ಎಸ್ಪಿ ಕಲಾ ಕೃಷ್ಣಸ್ವಾಮಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ರಾತ್ರಿಯಾಗಿದ್ದರಿಂದ ತಪಾಸಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ದಾಖಲಾತಿಗಳ ತಪಾಸಣೆಯನ್ನು ಮುಂದುವರೆಸಿದ್ದಾರೆ.
ಹೇಮಾವತಿ ನಾಲಾ ವಲಯದಲ್ಲಿ ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಸಕಾಲಕ್ಕೆ ಪರಿಹಾರ ಕೊಡದೆ ವಿನಾ ಕಾರಣ ವಿಳಂಬ ಮಾಡಿರುವುದು, ಹಿರಿತನ ಪರಿಗಣಿಸಿರುವುದ್, ಹಣ ಕೊಟ್ಟವರಿಗೆ ಮತ್ತು ಶಿಫಾರಸ್ಸು ಮಾಡಿಸಿದವರಿಗೆ ಪರಿಹಾರ ವಿತರಣೆ ಮಾಡುವ ಮೂಲಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಛೇರಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಹಲವು ದಾಖಲಾತಿಗಳ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.